ಬೆಂಗಳೂರು : ‘ವಿಪಕ್ಷ ನಾಯಕ ಅಶೋಕ್ ಅವರೇ, ನಿಮ್ಮ ರಾಜಕೀಯ ಜ್ಞಾನ ಮತ್ತು ಧೈರ್ಯವನ್ನು ಮೆಚ್ಚಲೇಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದದ ಹೋರಾಟವನ್ನು ನೇರವಾಗಿ ಪ್ರಧಾನಿ ಮೋದಿಯವರ ತಲೆಗೆ ಕಟ್ಟಿದ ಏಕೈಕ ಮೊದಲ ಬಿಜೆಪಿ ನಾಯಕ ಯಾರಾದರೂ ಇದ್ದರೆ ಅದು ನಮ್ಮ ರಾಜ್ಯದ ಸಾಮ್ರಾಟ್ ಅಶೋಕ್. ಇದು ನಮಗೊಂದು ಹೆಮ್ಮೆ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.

ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಯುವ ಹೋರಾಟಗಳನ್ನು ಪ್ರಧಾನಿ ಮೋದಿಯವರ ವಿರುದ್ಧದ ಹೋರಾಟಗಳೆಂದು ಸರಿಯಾಗಿಯೇ ಅರ್ಥೈಸಿಕೊಂಡಿರುವ ಸಾಮ್ರಾಟ್ ಅಶೋಕ್‍ಗೆ ಧನ್ಯವಾದಗಳು’ ಎಂದು ವ್ಯಂಗ್ಯವಾಡಿದ್ದಾರೆ.

‘ಕನ್ನಡದಲ್ಲಿ ಬರೆದುಕೊಂಡು ಬಂದ ವಂದೇ ಮಾತರಂ ಗೀತೆಯನ್ನೇ ಸರಿಯಾಗಿ ಓದಲು ಸಾಧ್ಯವಾಗದ ನಿಮ್ಮಿಂದ ನನ್ನ ಇಂಗ್ಲಿಷ್‌ ಹೇಳಿಕೆಯನ್ನು ಅರ್ಥಮಾಡಿಕೊಳ್ಳುತ್ತೀರಿ ಎಂಬ ನಿರೀಕ್ಷೆ ನನಗಿಲ್ಲ. ಆದರೂ ಮತ್ತೊಮ್ಮೆ ನಿಮಗೆ ಇನ್ನೂ ಸರಳವಾಗಿ ಅರ್ಥವಾಗುವ ಭಾಷೆಯಲ್ಲೇ ಸ್ಪಷ್ಟಪಡಿಸುತ್ತೇನೆ. ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ನಡೆಯುವ ಯಾವುದೇ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಅಂತಹ ಹೋರಾಟಗಳಿಗೆ ಅಗತ್ಯವಾದ ಸಹಕಾರವನ್ನೂ ನೀಡುತ್ತೇವೆ ಎಂದು ಉಲ್ಲೇಖಿಸಿದ್ದಾರೆ.

ಅದು ಪ್ರಧಾನಿ ಮೋದಿಯವರ ವಿರುದ್ಧವೇ ಇರಲಿ ಅಥವಾ ಬಿಜೆಪಿ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿರುವ ಸಂವಿಧಾನ ವಿರೋಧಿ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧವೇ ಇರಲಿ. ನಾವು ಅಂತಹ ಹೋರಾಟದ ಜೊತೆಗಿದ್ದೇವೆ. ಕಾಂಗ್ರೆಸ್ ಪಕ್ಷವಾಗಿ ನಾವು ಸಂವಿಧಾನದ ಪರ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಯುವ ಹೋರಾಟಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ. ಅಂತಹ ಹೋರಾಟಗಳಿಗೆ ಅಗತ್ಯ ಸಹಕಾರವನ್ನೂ ನೀಡುತ್ತೇವೆ. ಅಪರೂಪಕ್ಕೊಮ್ಮೆ ಸರಿಯಾಗಿಯೇ ಯೋಚಿಸುವ ಆರ್.ಅಶೋಕ್, ಜನರ ಇಂತಹ ಹೋರಾಟವನ್ನು ಮೋದಿಯವರ ವಿರುದ್ಧದ ಹೋರಾಟವೆಂದು ಸರಿಯಾಗಿಯೇ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸಂವಿಧಾನ ರಕ್ಷಣೆಯ ಹೋರಾಟವನ್ನು ದೇಶವಿರೋಧಿ ಎಂದು ಕರೆಯುವ ಆರ್.ಅಶೋಕ್, ನೀವು ಸಂವಿಧಾನ ವಿರೋಧಿ ಎಂಬುದನ್ನು ಸಾಭೀತುಪಡಿಸಿದ್ದೀರಿ. ರಾಜ್ಯದ ಖಜಾನೆಯನ್ನು ಹೋರಾಟಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ವಿಪಕ್ಷ ನಾಯಕರಾದ ನೀವು ಆಧಾರ ಸಹಿತ ಸಾಭೀತು ಮಾಡಬೇಕು. ನನ್ನ ಹೇಳಿಕೆಯಲ್ಲಿ ಇಲ್ಲದ ಹಣದ ವಿಚಾರವನ್ನು ದಾಖಲೆ ಸಹಿತ ನಿರೂಪಿಸಬೇಕು. ಇಲ್ಲದೇ ಇದ್ದರೆ ನೀವು ವಿಪಕ್ಷ ನಾಯಕನಾಗಿರಲು ಅನರ್ಹ ಎಂದು ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor