Bengaluru | ಎರಡು ಬಸ್ ಗಳ ನಡುವೆ ಅಪಘಾತ: 8 ಮಂದಿಗೆ ಗಾಯ
ಬೆಂಗಳೂರು: ನಗರದ ಪ್ರಮುಖ ಜಂಕ್ಷನ್ ಆದ ಕೆ.ಆರ್. ಸರ್ಕಲ್ (ಕೃಷ್ಣರಾಜೇಂದ್ರ ವೃತ್ತ) ಬಳಿ ಎರಡು ಬಿಎಂಟಿಸಿ (BMTC) ಬಸ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಇಂದು ಬೆಳಗಿನ ಜಾವ ಎಂದಿನಂತೆ ಕೆ.ಆರ್.ಸರ್ಕಲ್ ಬಳಿ ಸಂಚಾರ ದಟ್ಟಣೆ ಇತ್ತು. ಕೆ.ಆರ್. ಸರ್ಕಲ್ ಜಂಕ್ಷನ್ನ ಸಿಗ್ನಲ್ ನಲ್ಲಿ ಬಿಎಂಟಿಸಿಯ 'ವಾಯು ವಜ್ರ' ಬಸ್ ನಿಂತಿತ್ತು. ಇದೇ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಮತ್ತೊಂದು ಸಾಮಾನ್ಯ ಬಿಎಂಟಿಸಿ ಬಸ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಢಿಕ್ಕಿಯ ರಭಸಕ್ಕೆ ಸಾಮಾನ್ಯ ಬಿಎಂಟಿಸಿ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಬಸ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿ ಮೂಲದ ಭಾಗಮ್ಯ ಎಂಬ ಯುವತಿಯ ಕಾಲು ಬಸ್ಸಿನೊಳಗಡೆ ಸಿಕ್ಕಿಹಾಕಿಕೊಂಡಿತ್ತು.
ಬಳಿಕ ಕಬ್ಬಿಣದ ಸಲಾಕೆಗಳನ್ನು ತುಂಡರಿಸಿ ಯುವತಿಯನ್ನು ರಕ್ಷಿಸಲಾಗಿದೆ.
ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.