×
Ad

ಬೆಂಗಳೂರು: ಅಪರಿಚಿತ ವ್ಯಕ್ತಿಗೆ ರಾತ್ರಿ ವೇಳೆ ಸಹಾಯ ಮಾಡಿದ ಆಟೋ ಚಾಲಕಿ; ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ

Update: 2025-10-18 10:56 IST

PC: facebook.com/Bangalore 247

ಬೆಂಗಳೂರು: ಇಂದಿರಾನಗರದಿಂದ ಕೋರಮಂಗಲಕ್ಕೆ ಹೋಗಲು ಸಾಧ್ಯವಾಗದೇ ತಡರಾತ್ರಿ ಸಿಕ್ಕಿಹಾಕಿಕೊಂಡ ವ್ಯಕ್ತಿಯೊಬ್ಬರ ರಕ್ಷಣೆಗೆ ಮಹಿಳಾ ಆಟೊ ಚಾಲಕಿ ಮುಂದಾದ ಘಟನೆ ಕುರಿತ ಎಕ್ಸ್ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರುಣ್ ಅಗರ್ವಾಲ್ ಎಂಬವವರು ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, "ಇಂದಿರಾ ನಗರದಲ್ಲಿ ತಡರಾತ್ರಿ ಸಿಕ್ಕಿಹಾಕಿಕೊಂಡ ನನ್ನನ್ನು ಕೋರಮಂಗಲಕ್ಕೆ ಕರೆದೊಯ್ಯಲು ಹಲವು ಮಂದಿ ಆಟೊ ಚಾಲಕರು ನಿರಾಕರಿಸಿದರು. ಒಂದು ಕಿಲೋಮೀಟರ್ ನಡೆದುಕೊಂಡು ಹೋದಾಗ ರಸ್ತೆ ಬದಿ ಆಟೊ ನಿಲ್ಲಿಸಿದ ಚಾಲಕಿಯೊಬ್ಬರು ಗಮನಕ್ಕೆ ಬಂದರು. ಕೋರಮಂಗಲಕ್ಕೆ ಬರುವಂತೆ ಕೇಳಿದಾಗ ಇಡೀ ದಿನ ಕಾರ್ಯನಿರ್ವಹಿಸಿ ಮನೆಗೆ ಹೋಗಲು ಮುಂದಾಗಿದ್ದಾಗಿ ತಿಳಿಸಿದರು. ನಾನು ಹೊರಡಲು ಅನುವಾದಾಗ ಮತ್ತೆ ಕರೆದು ಡ್ರಾಪ್ ಮಾಡಲು ಒಪ್ಪಿಕೊಂಡರು" ಎಂದು ವಿವರಿಸಿದ್ದಾರೆ.

"ತೊಂದರೆ ಇಲ್ಲ; ಬೇರೆ ಆಟೊ ಹಿಡಿಯುತ್ತೇನೆ ಎಂದು ಹೇಳಿದರೂ ಕರುಣೆಯಿಂದ ಕೋರಮಂಗಲಕ್ಕೆ ಕರೆದುಕೊಂಡು ಹೋದರು. ಎಷ್ಟು ಬಾಡಿಗೆ ಕೊಡಬೇಕು ಎಂಬ ಚರ್ಚೆಯನ್ನೂ ಮಾಡಲಿಲ್ಲ. ವಾಸ್ತವವಾಗಿ ಉಬರ್ ನಲ್ಲಿ 300 ರೂಪಾಯಿ ಶುಲ್ಕವಾಗುತ್ತದೆ. ಆಟೊ ಚಾಲಕಿ ಮಾತ್ರ 200 ರೂಪಾಯಿ ಕೊಡುವಂತೆ ಕೇಳಿದರು. ಇದು ತೀರಾ ಕಡಿಮೆ ಎಂದು ಹೇಳಿ 300 ರೂಪಾಯಿ ಕೊಡಲು ಮುಂದಾದೆ. ಇದು ನನಗೆ ಇತ್ತೀಚಿನ ದಿನಗಳಲ್ಲಿ ಆದ ಅತ್ಯುತ್ತಮ ಆಟೊ ಅನುಭವ" ಎಂದು ಬಣ್ಣಿಸಿದ್ದಾರೆ.

ಈ ಪೋಸ್ಟ್ ಗೆ ಆನ್ಲೈನ್ ನಲ್ಲಿ ವ್ಯಾಪಕ ಸ್ಪಂದನೆ ಸಿಕ್ಕಿದ್ದು, ಆಟೊ ಚಾಲಕಿಯ ಕರುಣಾಮಯ ನಡತೆಯನ್ನು ಬಳಕೆದಾರರು ಹೊಗಳಿದ್ದಾರೆ. ಈ ಜಗತ್ತಿನಲ್ಲಿ ಬಹಳಷ್ಟು ಮಂದಿ ಒಳ್ಳೆಯವರಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

"ಈ ಘಟನೆ ಸಂಭವಿಸಿರುವುದ ಬೆಂಗಳೂರಿನಲ್ಲಿ; ಬಹಳಷ್ಟು ಮಂದಿ ಆಟೊ ಚಾಲಕರ ಬಗ್ಗೆ ಭೀತಿ ಹೊಂದಿದ್ದಾರೆ. ಇದು ಶ್ಲಾಘನೀಯ ಬದಲಾವಣೆ. ಸ್ತ್ರೀವಾದದ ಒಳ್ಳೆಯ ಉದಾಹರಣೆ" ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಮಹಿಳೆಯರನ್ನು ಗೌರವದಿಂದ ಕಂಡರೆ ಧನಾತ್ಮಕವಾಗಿ ಸ್ಪಂದಿಸುತ್ತಾರೆ ಎನ್ನುವುದಕ್ಕೆ ಇದು ನಿದರ್ಶನ ಎಂದು ಮತ್ತೊಬ್ಬರು ವಿಶ್ಲೇಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News