Bengaluru | ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ರೂ.ಗೌರವಧನ ನೀಡಲು ಒತ್ತಾಯ
ಬೆಂಗಳೂರು : ಸಮಸ್ತ ಆ್ಯಪ್ ಬಳಕೆಯಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವುದು, ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15ಸಾವಿರ ರೂ.ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಹೋರಾಟ ನಡೆಸಿದರು.
ಆಶಾ ಸಂಘದ ಜಿಲ್ಲಾ ಅಧ್ಯಕ್ಷೆ ರಮಾ ಟಿ.ಸಿ. ಮಾತನಾಡಿ, ಸರಕಾರವು ಆಶಾ ಕಾರ್ಯಕರ್ತೆಯರಿಗೆ ಸಮಸ್ತ ಆ್ಯಪ್ ಮೂಲಕ ಕೆಲಸ ನಿರ್ವಹಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ, ಆ್ಯಪ್ ಬಳಕೆಗೆ ಅಗತ್ಯವಾದ ಗುಣಮಟ್ಟದ ಮೊಬೈಲ್ ಅಥವಾ ಟ್ಯಾಬ್ಲೆಟ್‍ಗಳನ್ನು ಇಲಾಖೆ ಒದಗಿಸಿಲ್ಲ. ಈ ಹಿಂದೆ ಸ್ವಂತ ಮೊಬೈಲ್ ಬಳಕೆಗೆ ನೀಡುತ್ತಿದ್ದ ಮಾಸಿಕ 280 ರೂ. ಮೊತ್ತವನ್ನೂ ಸ್ಥಗಿತಗೊಳಿಸಿದೆ ಎಂದು ದೂರಿದರು.
ಸ್ವಂತ ಮೊಬೈಲ್‍ಗಳಲ್ಲಿ ಸರಕಾರಿ ಆ್ಯಪ್ ಬಳಸುವುದರಿಂದ ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ಧಕ್ಕೆಯಾಗುವ ಆತಂಕವಿದೆ. ದಿನವಿಡೀ ಆ್ಯಪ್‍ನಲ್ಲಿ ಕೆಲಸ ಮಾಡುವುದರಿಂದ ಮೊಬೈಲ್‍ನ ಮೆಮೊರಿ ತುಂಬಿಕೊಳ್ಳುತ್ತಿದ್ದು, ಸಾಧನಗಳ ಬಳಕೆಯ ಮೇಲೂ ಪರಿಣಾಮ ಬೀರುತ್ತಿದೆ. ಹಲವು ಕಾರ್ಯಕರ್ತೆಯರಿಗೆ ಸ್ಮಾರ್ಟ್‍ಫೋನ್ ಬಳಕೆಯ ಕುರಿತು ಸೂಕ್ತ ತಾಂತ್ರಿಕ ತರಬೇತಿ ನೀಡದಿರುವುದರಿಂದ ಕೆಲಸ ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ರಮಾ ತಿಳಿಸಿದರು.
ಆ್ಯಪ್‍ನಲ್ಲಿ ದಾಖಲಿಸಿದ ಮಾಹಿತಿ ಸರಿಯಾಗಿ ಉಳಿಯದಿರುವುದು, ದಾಖಲೆಗಳು ಕಾಣೆಯಾಗುವುದು, ಆಫ್‍ಲೈನ್‍ನಲ್ಲಿ ನಮೂದಿಸಿದ ಮಾಹಿತಿ ಆನ್‍ಲೈನ್‍ಗೆ ಅಪ್‍ಲೋಡ್ ಆಗದಿರುವುದು, ಒಂದೇ ದಾಖಲೆಯನ್ನು ಮತ್ತೆ ಮತ್ತೆ ನಮೂದಿಸಬೇಕಾಗುವ ಸ್ಥಿತಿ ಹಾಗೂ ಆ್ಯಪ್‍ನಲ್ಲಿನ ವರದಿಗಳು ಮತ್ತು ಭೌತಿಕ ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬರುತ್ತಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅಧಿಕಾರಿಗಳಿಗೆ ದೂರು ನೀಡಿದರೂ ತ್ವರಿತ ತಾಂತ್ರಿಕ ಪರಿಹಾರ ದೊರೆಯುತ್ತಿಲ್ಲ ಎಂದು ಅವರು ಆರೋಪಿಸಿದರು.
ಕ್ಷೇತ್ರಮಟ್ಟದ ಆರೋಗ್ಯ ಸೇವೆಗಳ ಜೊತೆಗೆ ಹೆಚ್ಚುವರಿ ಡಿಜಿಟಲ್ ಕೆಲಸದ ಹೊರೆ ಆಶಾ ಕಾರ್ಯಕರ್ತೆಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಈಗಾಗಲೇ ಹಲವು ವರ್ಷಗಳಿಂದ ಬಾಕಿ ಇರುವ ಪ್ರೊ ತ್ಸಾಹಧನ ಹಾಗೂ ಗೌರವಧನದ ಸಮಸ್ಯೆಗಳ ನಡುವೆಯೂ ಹೆಚ್ಚುವರಿ ಕೆಲಸದ ಒತ್ತಡ ಹೇರಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ದೊರೆಯುವ ಪ್ರೊ ತ್ಸಾಹಧನ ಸೇರಿದಂತೆ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು 15 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಗುಣಮಟ್ಟದ ಮೊಬೈಲ್‍ಗಳನ್ನು ಒದಗಿಸಿ, ಸಮಸ್ತ ಆ್ಯಪ್‍ನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಬಾಕಿ ಇರುವ ಪ್ರೊತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಸಂಬಂಧಿಸದ ನಿಕ್ಷಯ್ ಆ್ಯಪ್‍ನ ಕೆಲಸವನ್ನು ಅವರ ಮೇಲೆ ಹೇರಬಾರದು. ಜಿಪಿಎಸ್ ಲೊಕೇಶನ್ ದಾಖಲಿಸುವ ವಿಚಾರದಲ್ಲಿ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಮತ್ತು ಆ್ಯಪ್‍ನ ಸಮಸ್ಯೆಗಳನ್ನು ಪರಿಹರಿಸಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವವರೆಗೆ ಆ್ಯಪ್‍ಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವುದಿಲ್ಲ ಎಂದು ರಮಾ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಸುಮಿತ್ರ, ಮಮತಾ, ಶೋಭಾ, ಆಶಾ, ಪವಿತ್ರ, ಪುಷ್ಪಲತಾ ಸೇರಿದಂತೆ ಹಲವರು ಭಾಗವಹಿಸಿದ್ದರು.