ಬೆಂಗಳೂರು: ದಾರುಲ್ ಉಲೂಮ್ ಸಬೀಲುರ್ರಶಾದ್ ಮುಖ್ಯಸ್ಥ ಮೌಲಾನಾ ಸಗೀರ್ ಅಹ್ಮದ್ ಖಾನ್ ರಷಾದಿ ನಿಧನ
ಬೆಂಗಳೂರು: ರಾಜ್ಯದ ಪ್ರಖ್ಯಾತ ಇಸ್ಲಾಮೀ ವಿದ್ಯಾಲಯ ದಾರುಲ್ ಉಲೂಮ್ ಸಬೀಲುರ್ರಶಾದ್, ಬೆಂಗಳೂರು ಇದರ ಮುಖ್ಯಸ್ಥರು ಹಾಗು ರಾಜ್ಯದ ಅಮೀರ್ ಎ ಶರೀಯತ್ ಶೇಖುಲ್ ಹದೀಸ್ ಹಝ್ರತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಷಾದಿ (75) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ಫಜರ್ ನಮಾಝ್ ನಂತರ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದರು. ಅವರು ಕರ್ನಾಟಕದ ಮೂರನೇ ಅಮೀರ್ ಎ ಶರೀಅತ್ ಆಗಿ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.
ಮೌಲಾನಾ ಸೈಯದ್ ಮುಹಮ್ಮದ್ ಅಶ್ರಫ್ ಅಲಿ ಅವರ ನಿಧನದ ಬಳಿಕ, ಕರ್ನಾಟಕದ ಅಮೀರೆ ಶರೀಅತ್ ಆಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದ ಅವರು, ಸಿಎಎ–ಎನ್‌ಆರ್‌ಸಿ ವಿರೋಧಿ ಹೋರಾಟ ಸೇರಿದಂತೆ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದೇಶವ್ಯಾಪಿ ಹಮ್ಮಿಕೊಂಡಿರುವ “ವಕ್ಫ್ ಉಳಿಸಿ – ಸಂವಿಧಾನ ಉಳಿಸಿ” ಚಳವಳಿಯನ್ನು ರಾಜ್ಯದಲ್ಲಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹಝ್ರತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇಂದು ದಾರುಲ್ ಉಲೂಮ್ ಸಬೀಲುರ್ರಶಾದ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಿಗ್ಗೆ 10 ಗಂಟೆಗೆ ಸಬೀಲುರ್ರಶಾದ್ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹಝ್ರತ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಬೆಳಗ್ಗೆಯಿಂದಲೇ ಸಾರ್ವಜನಿಕರು ಸಬೀಲುರ್ರಶಾದ್ ಕಡೆಗೆ ಹರಿದು ಬರುತ್ತಿದ್ದಾರೆ. ಅಂತಿಮ ದರ್ಶನಕ್ಕೆ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಸಾರ್ವಜನಿಕರು ಮತ್ತು ಗಣ್ಯರು ಆಗಮಿಸುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ, ಸಬೀಲುರ್ರಶಾದ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ.