Bengaluru | ಪ್ರಿಯಕರನೊಂದಿಗೆ ಸೇರಿ ತಂದೆ-ತಾಯಿ, ತಂಗಿಯ ಹತ್ಯೆ: ಆರೋಪಿ ಬಂಧನ, ಪ್ರಿಯಕರನಿಗಾಗಿ ಹುಡುಕಾಟ
ಸಾಂದರ್ಭಿಕ ಚಿತ್ರ (AI)
ಬೆಂಗಳೂರು : ಪ್ರಿಯಕರನೊಂದಿಗೆ ಸೇರಿ ತಂದೆ-ತಾಯಿ ಹಾಗೂ ತಂಗಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿ ಶ್ವೇತಾ ಪುದುಚೇರಿಯಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನ ವೈಟ್‍ಫೀಲ್ಡ್ ವಿಭಾಗದ ಪೊಲೀಸರ ತಂಡ ಆಕೆಯನ್ನು ಒಂದೇ ದಿನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆಕೆಯ ಪ್ರಿಯಕರ ಕೆನತ್‍ಗಾಗಿ ಹುಡುಕಾಟ ಮುಂದುವರೆಸಿದೆ.
ಶ್ವೇತಾ ಎಂಬುವವರು ತನ್ನ ಪ್ರಿಯಕರ ಕೆನತ್‍ನ ಜೊತೆಗೂಡಿ ಆಕೆಯ ತಂದೆ ಸೋಮಸುಂದರ್(52), ತಾಯಿ ಮುತ್ತುಲಕ್ಷ್ಮೀ(48) ಹಾಗೂ ಕಿರಿಯ ಪುತ್ರಿ ಸುಪ್ರಿಯಾ(19) ಎಂಬವರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಸೋಮವಾರ ರಾತ್ರಿ ಸೀಗೇಹಳ್ಳಿಯಲ್ಲಿರುವ ನಡೆದಿರುವುದಾಗಿ ವರದಿಯಾಗಿತ್ತು.
ಕೃತ್ಯದ ಬಳಿಕ ಆರೋಪಿಗಳು ಸಿಸಿಟಿವಿ ಕ್ಯಾಮೆರಾಗಳನ್ನು ಮರೆಮಾಚಿ ಪರಾರಿಯಾಗಿದ್ದರು. ತಮ್ಮ ಬೈಕ್‍ನಲ್ಲಿಯೇ ಬೆಂಗಳೂರಿನಿಂದ ತಿರುವಣಮಲೈವರೆಗೂ ಪ್ರಯಾಣಿಸಿದರು. ಆದರೆ ತಿರುಮಣ್ಣಮಲೈನಲ್ಲಿ ಪ್ರಿಯಕರ ಕೆನತ್ ಶ್ವೇತಾಳನ್ನು ಒಬ್ಬಂಟಿಯಾಗಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೀಗ ಈಗ ಶ್ವೇತಾಳನ್ನು ಬಂಧಿಸಲಾಗಿದ್ದು, ಆಕೆಯ ಪ್ರಿಯಕರ ಕೆನತ್‍ನ ಬಂಧನಕ್ಕಾಗಿ ವೆಲಂಗಣಿ, ತಿರುವಣಮಲೈ, ತಿರುಚಿನಪಲ್ಲಿ ಭಾಗಗಳಲ್ಲಿ ಶೋಧ ನಡೆಸಲಾಗುತ್ತಿದೆ. ಇನ್ನು ಹತ್ಯೆ ನಡೆದ ಮನೆಯ ಶೋಧದ ವೇಳೆ ಶ್ವೇತಾಳ ಡೈರಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಪೋಷಕರು ಜೀವನವನ್ನು ನಿಯಂತ್ರಣ ಮಾಡುತ್ತಿದ್ದರು, ಯಾವ ಸ್ವಾತಂತ್ರ್ಯವೂ ಇರಲಿಲ್ಲ. ಆದ್ದರಿಂದ ತಾನೇ ಹತ್ಯೆ ಮಾಡಿದ್ದೇನೆ’ ಎಂದು ಆರೋಪಿ ಶ್ವೇತಾ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶ್ವೇತಾ ಹಾಗೂ ಕೆನತ್ ಖಾಸಗಿ ಕಾಲೇಜುವೊಂದರಲ್ಲಿ ಬಿ.ಟೆಕ್ ಓದುವಾಗಲೇ ಇಬ್ಬರ ನಡುವೆ ಪ್ರೀತಿ ಆರಂಭವಾಗಿತ್ತು. ಬಿ.ಟೆಕ್ ಮುಗಿಸಿ ಇಬ್ಬರು ಕೆಲಸಕ್ಕೆ ಸೇರಿಕೊಂಡು ವಿವಾಹವಾಗದೆ ಸಹಜೀವನ ನಡೆಸುತ್ತಿದ್ದರು. ಕೆಲದಿನಗಳ ಹಿಂದೆ ಇಬ್ಬರು ಕೆಲಸ ಬಿಟ್ಟು, ಸ್ವಂತ ಉದ್ಯಮ ಪ್ರಾರಂಭಿಸಲು ಬ್ಯಾಂಕ್‍ನಲ್ಲಿ 30 ಲಕ್ಷ ರೂ.ಗಳನ್ನು ಆಕೆಯ ಪೋಷಕರ ಹೆಸರಿನಲ್ಲಿ ಸಾಲ ಪಡೆದಿದ್ದರು. ಬ್ಯಾಂಕ್‍ಗೆ ಹಣವನ್ನು ಕಟ್ಟದ ಕಾರಣ ಪೋಷಕರಿಗೆ ನೋಟಿಸ್ ಬಂದಿತ್ತು. ಇದೇ ವಿಚಾರಕ್ಕೆ ಗಲಾಟೆಯಾಗಿ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.