ಬಿಡದಿ ಟೌನ್‍ಶಿಪ್ ವಿಚಾರದಲ್ಲಿ ಕುಮಾರಸ್ವಾಮಿಯಿಂದ ರಾಜಕೀಯ ಟೀಕೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್
"ನಮ್ಮ ಸರಕಾರಕ್ಕೆ ರೈತರ ಒಕ್ಕಲೆಬ್ಬಿಸುವ ಯೋಚನೆ ಇಲ್ಲ"
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ (File Photo: PTI)
ಬೆಂಗಳೂರು: ಬಿಡದಿ ಟೌನ್‍ಶಿಪ್ ವಿಚಾರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ರಾಜಕೀಯ ಕಾರಣಕ್ಕೆ ಟೀಕೆ ಮಾಡುತ್ತಿದ್ದಾರೆ. ಆದರೆ, ನಮ್ಮ ಸರಕಾರಕ್ಕೆ ರೈತರನ್ನು ಒಕ್ಕಲೆಬ್ಬಿಸುವ ಯೋಚನೆ ಇಲ್ಲ. ರೈತರ ಅಹವಾಲುಗಳನ್ನು ಆಲಿಸಿ, ಸಂಧಾನದ ಮೂಲಕ ಯೋಜನೆ ಜಾರಿ ಮಾಡಲು ಸರಕಾರ ಪ್ರಯತ್ನ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಟೌನ್‍ಶಿಪ್ ವಿಚಾರದಲ್ಲಿ ಕುಮಾರಸ್ವಾಮಿಗೆ ಸಿಎಂ ಪತ್ರ ಬರೆದಿದ್ದಾರೆ. ಜೂ.26ರ ಬೆಳಗ್ಗೆ 11 ಗಂಟೆಗೆ ನಮ್ಮ ಸಚಿವರು ಮತ್ತು ಅಧಿಕಾರಿಗಳೆಲ್ಲ ವಿಧಾನಸೌಧದಲ್ಲಿರುತ್ತೇವೆ, ನಿಮಗೆ ಯಾರೆಲ್ಲ ಅಧಿಕಾರಿಗಳೆಲ್ಲರ ಸಹಕಾರ ಬೇಕು ಅವರ ಜೊತೆ ಬನ್ನಿ, ಸಾಧಕ-ಬಾಧಕಗಳನ್ನು ಚರ್ಚೆ ಮಾಡೋಣ ಎಂದು ಕರೆದಿದ್ದಾರೆ. ಆ ಪತ್ರವನ್ನು ನಾನು ನೋಡಿದ್ದೀನಿ. ಅದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. ನೀವು ಬಿಡದಿಗೆ ಬನ್ನಿ, ಅಲ್ಲಿನ ರೈತರನ್ನು, ಸಂಬಂಧಪಟ್ಟವನ್ನು ಕರೀತೀವಿ, ಅಲ್ಲೇ ಚರ್ಚೆ ಮಾಡೋಣ ಎಂದು ಕರೆದಿದ್ದಾರೆ. ಆದರೆ ಜೂ.26ಕ್ಕೆ ಬೇಡ, ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ, ಜೂ.27ಕ್ಕೆ ಬನ್ನಿ ಎಂದು ಕುಮಾರಸ್ವಾಮಿ ಕರೆದಿದ್ದಾರೆ. ಇದರ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಏನು ತೀರ್ಮಾನ ಮಾಡುತ್ತಿದ್ದಾರೆ ಎಂಬುದನ್ನು ನೋಡಬೇಕು ಎಂದರು.
ಬಿಡದಿ ಟೌನ್‍ಶಿಪ್ ಯೋಜನೆ ಬಗ್ಗೆ ಈಗಾಗಲೇ ಸಂಪುಟದಲ್ಲಿ ಚರ್ಚೆ ಆಗಿದೆ, ಬಿಡಿಎ, ಹಡ್ಕೊ ಇವುಗಳಿಂದ ಯಾವ ರೀತಿ ಅನುದಾನ ಒದಗಿಸಬೇಕು ಎಂಬ ಬಗ್ಗೆ ವಿಸ್ತೃತವಾಗಿ ಚರ್ಚೆಯಾಗಿದೆ. ಆದರೆ ಈ ಯೋಜನೆ ಈಗ ರಾಜಿಕೀಯ ತಿರುವು ಪಡೆಯುತ್ತಿರುವುದರಿಂದ ಇದನ್ನು ರಾಜಕೀಯದಿಂದ ದೂರ ಇಟ್ಟು ಯಾವ ರೀತಿ ಯೋಜನೆಯನ್ನು ಜಾರಿ ಮಾಡಬೇಕು ಎನ್ನುವ ಬಗ್ಗೆ ಸರಕಾರ, ಸಿಎಂ ಎಲ್ಲರೂ ಸೇರಿ ತೀರ್ಮಾನ ಮಾಡುತ್ತೇವೆ ಎಂದು ಅವರು ನುಡಿದರು.
ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ಹಳೆಯ ಹೇಳಿಕೆಗಳನ್ನು ತೋರಿಸಿ, ರಾಜಕೀಯ ಮಾಡಲು ಹೊರಟಿದ್ದಾರೆ. ಅದನ್ನು ಬಿಟ್ಟು ಬಂದು ಅವರು ಸಲಹೆ ನೀಡಲಿ. ಆಗ ನಾವು ಅವರ ಅನುಮಾನಗಳಿಗೆ, ಆರೋಪಗಳಿಗೆ ಸೂಕ್ತ ಉತ್ತರ ನೀಡುತ್ತೇವೆ. ಈ ತೀರ್ಮಾನ ಕೈಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಸರಕಾರ ಉತ್ತರ ಕೊಡಲು ಸಿದ್ಧವಿದೆ. ಆದರೆ ಕುಮಾರಸ್ವಾಮಿ ಬೀದಿಗಿಳಿದು ಹೋರಾಟ ಮಾಡುತ್ತೇವೆಂದರೆ ರಾಜಕೀಯ ಕಾರಣಕ್ಕಾಗಿ ಮಾಡುತ್ತೀರಿ ಎಂಬುದನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ರೈತರನ್ನು ಒಕ್ಕಲೆಬ್ಬಿಸುವುದು ಬೇಡ ಎನ್ನುವುದು ನಮ್ಮ ಉದ್ದೇಶವೂ ಆಗಿದೆ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಒಪ್ಪಿಗೆಯ ಮೇಲೆ ಯೋಜನೆಯನ್ನು ಮಾಡಬೇಕೆಂದು ಪ್ರಯತ್ನ ಮಾಡುತ್ತಿದ್ದೇವೆ. ಕೆಲ ರೈತರು ನಮ್ಮದು ಒಣ ಭೂಮಿ ಇದೆ, ಇದರಿಂದ ನಮಗೆ ಅನುಕೂಲ ಇಲ್ಲ, ಈ ಭೂಮಿಯನ್ನು ನಾವು ಕೊಡಲು ಸಿದ್ಧರಿದ್ದೇವೆ. ನಮಗೆ ಹೆಚ್ಚು ಹಣ ಕೊಡಿ ಎಂದು ಕೇಳುತ್ತಾರೆ, ಅಂತಹವರಿಗೆ ಸೂಕ್ತ ಪರಿಹಾರದ ಹಣ ನೀಡಿದರೆ ಅವರು ಬೇರೆ ಕಡೆ ಜಮೀನು ತೆಗೆದುಕೊಳ್ಳುತ್ತಾರೆ. ನಾವು ಈ ದೃಷ್ಟಿಕೋನದಲ್ಲಿ ಮುಂದುವರೆಯುತ್ತಿದ್ದೇವೆ. ಆದರೆ ಅವರು ರಾಜಕೀಯ ಮಾಡಲು ಹೊರಟರೆ ಕಷ್ಟ ಎಂದರು.
ಹತ್ತು ದಿನಗಳಿಂದ ನನ್ನ ಆರೋಗ್ಯ ಸರಿಯಿರಲಿಲ್ಲ. ಮಾಜಿ ಸಚಿವ ಎಚ್.ಕೆ.ಪಾಟೀಲ್‍ರು ನನ್ನನ್ನು ನೋಡಲು ಬರುತ್ತೇನೆಂದರು. ಇಂದು ನಾನೇ ಹೊರಗಡೆ ಬಂದಿದ್ದೆ. ಹೀಗಾಗಿ ನಾನೇ ನಿಮ್ಮನ್ನು ಭೇಟಿ ಮಾಡಲು ಬರುತ್ತೇನೆ ಎಂದು ತಿಳಿಸಿದ್ದೆ. ಔಪಚಾರಿಕವಾಗಿ ಮಾತನಾಡಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ನಾನು, ಎಚ್.ಕೆ ಪಾಟೀಲ್, ಮೊಯ್ಲಿ ಸಂಪುಟದಲ್ಲಿ ಒಟ್ಟಿಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದೆವು. ಅಂದಿನಿಂದ ಇಂದಿನವರೆಗೂ ನಮ್ಮಿಬ್ಬರ ಸ್ನೇಹ ಅಪಾರವಾದದ್ದು. ಅದಕ್ಕೂ ಮೊದಲು ಎಚ್‍ಕೆಪಿ ಅವರ ತಂದೆ ಕೆ.ಎಚ್.ಪಾಟೀಲ್ ಇದ್ದರು. ನಾನು ಮೊದಲ ಬಾರಿ ಎಂಎಲ್‍ಎ ಆದಾಗ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದ ಸಂದರ್ಭದಲ್ಲಿ ಅವರೆಲ್ಲಾ ಸಂಪುಟದಲ್ಲಿದ್ದರು. ಅವರ ಬಗ್ಗೆ ನಮಗೆ ಗೌರವವಿದೆ. ಆಗ ನಾವೆಲ್ಲ ಚಿಕ್ಕವರು. ನಮ್ಮನ್ನು ಏಕವಚನದಲ್ಲೇ ಮಾತನಾಡಿಸುತ್ತಿದ್ದರು. ನಮಗೆ ಅಲ್ಲಿಂದ ಸಂಬಂಧ ಬಂದಿದೆ. ಹಾಗಾಗಿ ಈ ಸಂಬಂಧ ಕೊನೆಯವರೆಗೂ ಉಳಿದುಕೊಂಡು ಹೋಗುತ್ತೆ ಎನ್ನುವ ನನ್ನ ವಿಶ್ವಾಸ ಇದೆ ಎಂದು ಪರಮೇಶ್ವರ್ ನುಡಿದರು.
ಎಚ್.ಕೆ. ಪಾಟೀಲ್ ಎಂದೂ ನನ್ನನ್ನು ಮಂತ್ರಿ ಮಾಡಿ ಎಂದು ಕೇಳಿದವರಲ್ಲ. ಅವರು ತಮ್ಮ ತಂದೆಯವರನ್ನು ನೋಡಿ ಹಾಗೂ ಆ ಭಾಗದ ಜನರನ್ನು ನೋಡಿ ರಾಜಕೀಯವನ್ನು ಅರ್ಥಮಾಡಿಕೊಂಡಿದ್ದಾರೆ. ರಾಜಕೀಯವಾಗಿ ನಮ್ಮ ಸರಕಾರಕ್ಕೆ ಬಹಳ ಸಂದರ್ಭದಲ್ಲಿ ಇದರಿಂದ ಸಹಾಯವಾಗಿದೆ ಎಂದು ಅವರು ತಿಳಿಸಿದರು.