‘ಒಳಮೀಸಲಾತಿ ಅನ್ವಯ ಹೊಸ ಪ್ರಮಾಣ ಪತ್ರ ನೀಡಲು ಸೂಚನೆ ಕೊಡಿ’ : ಡಿಸಿಎಂ ಡಾ.ಜಿ.ಪರಮೇಶ್ವರ್ ಗೆ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಪತ್ರ
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
ಬೆಂಗಳೂರು : ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಒಳ ಮೀಸಲಾತಿ ಪ್ರಕಾರ ಪ್ರಮಾಣ ಪತ್ರ ನೀಡುವ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ತಹಶಿಲ್ದಾರರಿಗೆ ಅರ್ಜಿಗಳನ್ನು ತ್ವರಿತ ವಿಲೇವಾರಿಗೆ ಸೂಚನೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್, ಕಂದಾಯ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ.
ಬುಧವಾರ ಈ ಸಂಬಂಧ ಪತ್ರ ಬರೆದಿರುವ ಶಿವಕುಮಾರ್, ಸರಕಾರವು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿ ಮಾಡಿರುತ್ತದೆ. ಒಳ ಮೀಸಲಾತಿ ಪ್ರಕಾರ ಎಸ್‍ಸಿ-ಎ, ಎಸ್‍ಸಿ-ಬಿ ಹಾಗೂ ಎಸ್‍ಸಿ-ಸಿ ಎಂದು ವಿಭಜಿಸಿದ್ದು, ಅವರವರ ಜಾತಿಗಳಿಗೆ ಅನ್ವಯಿಸುವಂತೆ ಪ್ರತ್ಯೇಕವಾದ ಜಾತಿ ಪ್ರಮಾಣ ಪತ್ರ ಪಡೆಯಬೇಕಾಗಿದೆ. ಆದರೆ, ತಾಲೂಕು ಕಚೇರಿಗಳಲ್ಲಿ ಈ ರೀತಿ ಒಳಮೀಸಲಾತಿ ಪ್ರಕಾರ ಪ್ರಮಾಣ ಪತ್ರ ನೀಡುವುದನ್ನು ವಿಳಂಬ ಮಾಡುತ್ತಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಆಗಿದೆ ಎಂದು ತಿಳಿಸಿದ್ದಾರೆ.
‘ಒಳ ಮೀಸಲಾತಿ ಪ್ರಕಾರ ಹೊಸ ಪ್ರಮಾಣ ಪತ್ರ ಇಲ್ಲದ ಕಾರಣಕ್ಕೆ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೂ ತೊಂದರೆ ಆಗಿರುತ್ತದೆ. ಈಗಾಗಲೇ ಕೆಇಎ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಿದ್ದು ವಾರದಲ್ಲಿ ಪ್ರಮಾಣ ಪತ್ರಗಳನ್ನು ಕೊಡಿಸದೇ ಇದ್ದರೆ ಎಲ್ಲ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳ ರೀತಿ ಎಂಜಿನಿಯರಿಂಗ್, ವೈದ್ಯಕೀಯ ಇತ್ಯಾದಿ ಕೋರ್ಸ್‍ಗಳಿಗೆ ಪ್ರವೇಶ ಪಡೆಯಬೇಕಾಗುತ್ತದೆ’ ಎಂದು ಅವರು ಉಲ್ಲೇಖಿಸಿದ್ದಾರೆ.
‘ಸರಿಸುಮಾರು 15ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಪ್ರವೇಶಾತಿಗಾಗಿ ಹೊಸ ಜಾತಿ ಪ್ರಮಾಣ ಪತ್ರವನ್ನು ಪಡೆದಿರುವುದಿಲ್ಲ. ಅದೇ ರೀತಿ ಪೋಲಿಸ್ ಇತ್ಯಾದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ಸಲ್ಲಿಸುವುದಕ್ಕೂ ಒಳಮೀಸಲಾತಿ ಪ್ರಕಾರ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರಗಳ ಅಗತ್ಯ ಇದೆ ಎಂಬುದನ್ನು ಮನಗಾಣಬೇಕು’ ಎಂದು ಕೋರಿದ್ದಾರೆ.
‘ಒಟ್ಟಿನಲ್ಲಿ ಇದೊಂದು ಗಂಭೀರ ವಿಷಯವಾಗಿದ್ದು, ಸದರಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಉದ್ಯೋಗದ ಸೌಲಭ್ಯಗಳನ್ನು ಪಡೆಯಲು ಕೂಡಲೇ ಜಾತಿ ಪ್ರಮಾಣ ಪತ್ರ ಕೊಡಿಸುವ ಮೂಲಕ ಸಹಕರಿಸಬೇಕು. ಇಲ್ಲದಿದ್ದರೆ ಒಳ ಮೀಸಲಾತಿ ಘೋಷಿಸಿಯೂ ಪರಿಶಿಷ್ಟ ಜಾತಿಯ ಮಕ್ಕಳಿಗೆ ಪ್ರಯೋಜನಕ್ಕೆ ಬರದಂತೆ ಆಗಲಿದೆ’ ಎಂದು ಅವರು ಗಮನ ಸೆಳೆದಿದ್ದಾರೆ.