Bengaluru | ರಸ್ತೆ ಗುಂಡಿ ದುರಸ್ತಿಗೆ ಹಣ ವ್ಯಯಿಸಿರುವ ಕುರಿತು ಶ್ವೇತಪತ್ರ ಹೊರಡಿಸಲು ಸಂಸದ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು: ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿ ದುರಸ್ತಿಗೆ ಮೂರು ವರ್ಷದಲ್ಲಿ ಎಷ್ಟು ಹಣ ವ್ಯಯಿಸಿದ್ದೀರಿ ಎಂಬುದರ ಬಗ್ಗೆ ಮೂವತ್ತು ದಿನಗಳ ಒಳಗೆ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಜನತೆಯ ತೆರಿಗೆ ಹಣ. ತೆರಿಗೆ ಕಟ್ಟದಿದ್ದರೆ ದಂಡ ಹಾಕುತ್ತಾರೆ. ಹಾಗಾದರೆ ನಮ್ಮ ರಸ್ತೆಗೆ ಜವಾಬ್ದಾರಿ ಯಾರು ಎಂಬುದೂ ತಿಳಿಯಬೇಕು. ಅದೇ ರೀತಿಯಲ್ಲಿ ನಗರದಲ್ಲಿ ಬಿಡಿಎ, ಬಿಎಂಆರ್‍ಸಿಎಲ್, ಕೆಆರ್‍ಐಡಿಎಲ್‍ನಲ್ಲಿ ಯಾರು ಏನು ಮಾಡುತ್ತಿದ್ದಾರೆಂಬುದರ ವಿವರವಾದ ದತ್ತಾಂಶ ಹೊಂದಿರುವ ಡ್ಯಾಶ್ ಬೋರ್ಡ್ ಅಗತ್ಯವಿದೆ. ಎರಡು ತಿಂಗಳ ಒಳಗೆ ಈ ಡ್ಯಾಶ್ ಬೋರ್ಡ್ ಹಾಕಬೇಕು ಎಂದರು.
ಕೇವಲ ಅಧಿಕಾರಿ ಅಮಾನತು ಮಾಡಿದರೆ ವ್ಯವಸ್ಥೆ ಬದಲಾಗಲ್ಲ. ಜನರಿಗೆ ರಸ್ತೆಯ ಸಮಗ್ರ ಮಾಹಿತಿ ಬೇಕು. ಡ್ಯಾಶ್‍ಬೋರ್ಡ್ ಇದ್ದರೆ ಸಚಿವರಿಗೂ ಸಹಾಯ ಆಗಲಿದೆ. ನನ್ನ ಹಣ ಎಲ್ಲಿ ಹೋಗುತ್ತಿದೆ ಎಂಬುದು ನಾಗರಿಕರಿಗೆ ತಿಳಿಯಲಿದೆ. ಬಿ-ಸ್ಮೈಲ್‍ನಲ್ಲಿ ಬಿಬಿಎಂಪಿ ಎಂಜಿನಿಯರ್‍ಗಳೇ ಇದ್ದಾರೆ. ಬೆಂಗಳೂರಿಗೆ ಸಾಂಸ್ಥಿಕ ಬದಲಾವಣೆ ಬೇಕಾಗಿದೆ ಎಂದು ಅವರು ಹೇಳಿದರು.
ಪತ್ರ: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿ ಮಾಡಬೇಕು ಎಂದು ಕೋರಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರಿಗೆ ಪತ್ರ ಬರೆದಿದ್ದೇನೆ. ಜನರ ಜೀವನಮಟ್ಟ ಸುಧಾರಿಸುವ ಕ್ರಮಗಳಿಗೆ ಶೇ.100ರಷ್ಟು ಬೆಂಬಲವನ್ನು ಕೇಂದ್ರದ ಮಟ್ಟದಲ್ಲಿ ನೀಡಲಾಗುವುದು. ರಾಜ್ಯದ 30ಕ್ಕೂ ಹೆಚ್ಚು ಯೋಜನೆಗಳು ಬಾಕಿ ಇವೆ. ಹೊಸ ಯೋಜನೆ ಜಾರಿ ಮಾಡುವ ಮೊದಲು ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಕೋರಿದ್ದೇನೆ ಎಂದರು.
ನಾಲ್ಕೂವರೆ ವರ್ಷಗಳಿಂದ ಹೊಸ ಮೆಟ್ರೊ ಕಾಮಗಾರಿ ಆರಂಭವಾಗಿಲ್ಲ. ಕೇಂದ್ರ ಸರಕಾರ ಒಪ್ಪಿಗೆ ನೀಡಿರುವ ಮೆಟ್ರೊ ಮೂರನೇ ಹಂತದ ಆರೆಂಜ್ ಮಾರ್ಗಕ್ಕೆ ಎರಡು ವರ್ಷ ಆದರೂ ಟೆಂಡರ್ ಆಗಿಲ್ಲ. ಇದರ ವೆಚ್ಚ ಹೆಚ್ಚಳವಾಗುತ್ತಿದೆ. ಮೆಟ್ರೊ ಯೋಜನೆಯಲ್ಲಿ ವೆಚ್ಚ ಕಡಿಮೆ ಮಾಡಲು ಭೂಗತ ಮೆಟ್ರೊ ನಿಲ್ದಾಣಗಳ ಉದ್ದ ಕಡಿಮೆ ಮಾಡಿದ್ದಾರೆ. ಇದರಿಂದ ಎಂಟು ಬೋಗಿ ಬದಲು ಆರು ಬೋಗಿಯ ಮೆಟ್ರೊ ಮಾತ್ರ ನಿಲುಗಡೆ ಮಾಡಬಹುದು. ವೆಚ್ಚ ಕಡಿಮೆ ಮಾಡಲು ನಿಲ್ದಾಣದ ಪ್ಲಾಟ್‍ಫಾರಂ ಉದ್ದ ಕಡಿಮೆ ಮಾಡಿದರೆ ಉಪಯೋಗ ಆಗದು ಎಂದರು.