×
Ad

ಬೆಂಗಳೂರು | ಖಾಸಗಿ ಫೈನಾನ್ಸ್ ಕಂಪೆನಿಗೆ 48 ಕೋಟಿ ರೂ ವಂಚನೆ: ಇಬ್ಬರು ಸೈಬರ್ ಆರೋಪಿಗಳ ಬಂಧನ, ಮುಂದುವರೆದ ಶೋಧ

Update: 2025-10-27 19:59 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ವಿದೇಶಿ ಹ್ಯಾಕರ್‌ಗಳೊಂದಿಗೆ ಶಾಮೀಲಾಗಿ ಬೆಂಗಳೂರಿನ ಫೈನಾನ್ಸ್ ಕಂಪೆನಿಯೊಂದರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಬರೋಬ್ಬರಿ 48 ಕೋಟಿ ರೂ. ಹಣವನ್ನು ವಂಚಿಸಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಸಿಸಿಬಿಯ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ರಾಜಸ್ತಾನ ಮೂಲದ ಸಂಜಯ್ ಪಟೇಲ್(43) ಹಾಗೂ ಬೆಳಗಾವಿಯ ಇಸ್ಮಾಯಿಲ್ ರಶೀದ್ ಅತ್ತರ್(27) ಎಂದು ಗುರುತಿಸಲಾಗಿದೆ.

ವಂಚನೆಗೆ ಬಳಸಲಾಗಿದ್ದ 600ಕ್ಕೂ ಅಧಿಕ ನಕಲಿ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಲಾಗಿದ್ದು, ಇದುವರೆಗೂ 10 ಕೋಟಿ ರೂ. ಹಣ ಹಿಂಪಡೆಯಲಾಗಿದೆ. ಬಂಧಿತ ಆರೋಪಿಗಳಿಂದ ಲ್ಯಾಪ್‍ಟಾಪ್, ಪೆನ್‍ಡ್ರೈವ್ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ದುಬೈನಲ್ಲಿ ಕುಳಿತು ವಂಚನೆಯ ಜಾಲದಲ್ಲಿ ತೊಡಗಿರುವ ಭಾರತೀಯ ಮೂಲದ ಇನ್ನಿಬ್ಬರು ಆರೋಪಿಗಳ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಈ ಸೈಬರ್ ವಂಚನೆಯು ಆಗಸ್ಟ್ 7ರಂದು ನಡೆದಿದ್ದು,  ಫೈನಾನ್ಸ್ ಕಂಪೆನಿಯ ವ್ಯವಸ್ಥಾಪಕರೊಬ್ಬರು ಆಗಸ್ಟ್ 9ರಂದು ಸಿಸಿಬಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಎಫ್‍ಐಆರ್ ದಾಖಲಿಸಿ ತನಿಖೆ ಆರಂಭಿಸಿದ ಸಿಸಿಬಿ ಪೊಲೀಸರು ಕರ್ನಾಟಕದೊಂದಿಗೆ ಹೈದರಾಬಾದ್‍ನಲ್ಲೂ ಶೋಧ ನಡೆಸಿದ್ದರು. ತನಿಖೆಯಲ್ಲಿ ವಿದೇಶದಿಂದ ವರ್ಚುವಲ್ ಪ್ರೈವೇಟ್ ನೆಟ್‍ವರ್ಕ್(ವಿಪಿಎನ್) ಬಳಸಿ ಖಾತೆ ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ.

ವಂಚನೆಯ ಜಾಡು ಬೆನ್ನತ್ತಿದ್ದ ಸಿಸಿಬಿ ಪೊಲೀಸರು ಐಪಿ ಅಡ್ರೆಸ್‍ಗಳು, ಹಣ ವರ್ಗಾವಣೆಯಾದ ಖಾತೆಗಳ ವಿವರಗಳನ್ನು ಆಧರಿಸಿ ಸಂಜಯ್ ಪಟೇಲ್ ಹಾಗೂ ಇಸ್ಮಾಯಿಲ್ ರಶೀದ್ ಅತ್ತರ್‍ನನ್ನು ಬಂಧಿಸಿದ್ದಾರೆ. ದುಬೈನಲ್ಲಿರುವ ವಂಚಕರ ತಂಡದೊಂದಿಗೆ ಇಸ್ಮಾಯಿಲ್ ಮತ್ತು ಸಂಜಯ್ ಪಟೇಲ್ ನಿಕಟ ಸಂಪರ್ಕ ಹೊಂದಿದ್ದರು ಎಂಬುದು ವಿಚಾರಣೆಯಲ್ಲಿ ಖಚಿತವಾಗಿದೆ. ಅಲ್ಲದೆ, ಈ ವಂಚನೆಗಾಗಿ ಹಾಂಕಾಂಗ್, ಫಿಲಿಫೈನ್ಸ್ ಮೂಲದ ಹ್ಯಾಕರ್ಸ್‍ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಳಗಾವಿ ಮೂಲದ ಇಸ್ಮಾಯಿಲ್ ಡೇಟಾ ಸೆಂಟರ್‍ನಿಂದ ವರ್ಚುವಲ್ ಪ್ರೈವೇಟ್ ಸರ್ವರ್ ಅನ್ನು ಖರೀದಿಸಿದ್ದ. ಒಟ್ಟು 5 ವಿಪಿಎನ್‍ಗಳನ್ನು 2 ಸಾವಿರ ರೂಪಾಯಿಗೆ ಬಾಡಿಗೆಗೆ ಪಡೆದಿದ್ದರು. ವಂಚನೆಯ 48 ಕೋಟಿ ರೂಪಾಯಿ ಹಣವು 600ಕ್ಕೂ ಅಧಿಕ ನಕಲಿ ಖಾತೆಗಳಿಗೆ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಘಟನೆಯಿಂದ ಬೆಂಗಳೂರಿನ ಫೈನಾನ್ಸ್ ಕಂಪೆನಿಗೆ ದೊಡ್ಡ ನಷ್ಟ ಉಂಟಾಗಿದ್ದು, ಸೈಬರ್ ವಂಚಕರ ಬಗ್ಗೆ ಗಂಭೀರ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ವಿಪಿಎನ್ ಹ್ಯಾಕಿಂಗ್ ಮತ್ತು ನಕಲಿ ಖಾತೆಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಸಿಸಿಬಿ ಪೊಲೀಸರು ಸಲಹೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News