Bengaluru | ಬಾಲಕನ ಹತ್ಯೆ ಪ್ರಕರಣ: ಅಪ್ರಾಪ್ತರಿಬ್ಬರ ಬಂಧನ
ಸಾಂದರ್ಭಿಕ ಚಿತ್ರ | Image by Rochak Shukla on Magnific
ಬೆಂಗಳೂರು : ವಿಭೂತಿಪುರದ ಕೆರೆಯ ಬಳಿ 13 ವರ್ಷದ ಬಾಲಕನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಎಚ್ಎಎಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಿಂಗಳ ಹಿಂದೆ ದ್ವಿಚಕ್ರ ವಾಹನ ಅಡ್ಡಗಟ್ಟಿದ ಕ್ಷುಲ್ಲಕ ಕಾರಣಕ್ಕೆ ಬಾಲಕ, ಆತನ ಸಹೋದರ ಹಾಗೂ ಓರ್ವ ಆರೋಪಿಯ ನಡುವೆ ಜಗಳವಾಗಿತ್ತು. ಆ ವೈಷಮ್ಯವನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿ ಆಗಾಗ ಬಾಲಕನ ಜೊತೆ ಗಲಾಟೆ ಮಾಡುತ್ತಿದ್ದ. ಅಕ್ಟೋಬರ್ 4ರಂದು ಸಂಜೆ ಬಾಲಕ ವಿಭೂತಿಪುರ ಕೆರೆಯ ಬಳಿ ಇದ್ದಾಗ, ಮೊದಲೇ ಹೊಂಚು ಹಾಕಿ ಕುಳಿತಿದ್ದ ಇಬ್ಬರು ಅಪ್ರಾಪ್ತರು ಆತನ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಹಲ್ಲೆಯ ತೀವ್ರತೆಗೆ ಆತ ಕುಸಿದುಬಿದ್ದಾಗ, ಮುಖದ ಮೇಲೆ ದೊಡ್ಡ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮರುದಿನ ಮುಂಜಾನೆ ಬಾಲಕನ ಶವ ಪತ್ತೆಯಾದ ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಎಚ್ಎಎಲ್ ಠಾಣೆ ಪೊಲೀಸರು, ತನಿಖೆಯನ್ನು ನಡೆಸಿ ಈಗ ಅಪ್ರಾಪ್ತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.