Bengaluru | ನೈಸ್ ರಸ್ತೆಯಲ್ಲಿ ಅಗ್ನಿಗಾಹುತಿಯಾದ ಕೆಮಿಕಲ್ ಟ್ಯಾಂಕರ್ ; ಚಾಲಕ ಪಾರು
ಬೆಂಗಳೂರು : ಚೆನ್ನೈನಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಕೆಮಿಕಲ್ ಟ್ಯಾಂಕರ್ ಲಾರಿಯೊಂದು ಅಪಘಾತಕ್ಕೀಡಾಗಿ ಅಗ್ನಿಗಾಹುತಿಯಾದ ಘಟನೆ ನೈಸ್ ರಸ್ತೆಯ ಕನಕಪುರ ಟೋಲ್ ಬಳಿ ರವಿವಾರ ಸಂಭವಿಸಿದ್ದು, ಅದೃಷ್ಟವಶಾತ್ ಟ್ಯಾಂಕರ್ನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತೆರಳುತ್ತಿದ್ದ ಟ್ಯಾಂಕರ್ನ ಟೈರ್ ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ. ಪರಿಣಾಮ ನಿಯಂತ್ರಣ ತಪ್ಪಿದ ಟ್ಯಾಂಕರ್ ಕಾರೊಂದಕ್ಕೆ ಸ್ಪರ್ಶಿಸಿ, ಬೆಂಕಿ ಹೊತ್ತಿಕೊಂಡಿತು. ಟ್ಯಾಂಕರ್ಗೆ ಹೊತ್ತಿಕೊಂಡ ಬೆಂಕಿ ಉಂಡೆಯಾಗಿ ಮಾರ್ಪಟ್ಟಿತ್ತು. ಸುಮಾರು ಒಂದೂವರೆ ಗಂಟೆಗೂ ಅಧಿಕ ಸಮಯದಿಂದ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟರು.
ಮುಂಬೈ ಮೂಲದ ಕೆಮಿಕಲ್ ಕಂಪೆನಿಯೊಂದರ ಟ್ಯಾಂಕರ್ ಇದಾಗಿದ್ದು, ಅದರೊಳಗೆ 4-5 ಪ್ರತ್ಯೇಕ ಟ್ಯಾಂಕ್ಗಳಿದ್ದವು. ಅದರಲ್ಲಿ ಎರಡು ಟ್ಯಾಂಕ್ಗಳು ಬೆಂಕಿಗಾಹುತಿಯಾಗಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಹೆಚ್ಚಿನ ಅಪಾಯವಾಗದಂತೆ ತಡೆಯಲು ‘ನಿಯಂತ್ರಿತ ವಾತಾವರಣ’ದಲ್ಲಿ ಬ್ಲಾಸ್ಟ್ ಮಾಡಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಅಗ್ನಿಶಾಮಕದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಿಂದ ನೈಸ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಅಂಜನಾಪುರ ಭಾಗದಿಂದ ಬೆಂಗಳೂರು ನಗರದ ಕಡೆ ಬರುವ ರಸ್ತೆಯಲ್ಲಿ ಸುಮಾರು ಐದು ಕಿಲೋಮೀಟರ್ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬೆಂಗಳೂರಿನಿಂದ ಹೊರ ಹೋಗುವ ರಸ್ತೆಯಲ್ಲಿ ಸುಮಾರು ಮೂರು ಕಿಲೋಮೀಟರ್ವರೆಗೆ ಸಂಚಾರ ದಟ್ಟಣೆಯುಂಟಾಗಿತ್ತು.
ಘಟನಾ ಸ್ಥಳಕ್ಕೆ ತಲಘಟ್ಟಪುರ ಸಂಚಾರ ಠಾಣೆ ಪೊಲೀಸರು ಧಾವಿಸಿದ್ದು, ವಾಹನಗಳ ದಟ್ಟಣೆ ನಿರ್ವಹಿಸುತ್ತಿದ್ದಾರೆ. ವಾಹನಗಳ ದಟ್ಟಣೆ ತಗ್ಗಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು. ಈ ಭೀಕರ ಅವಘಡದಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ.