ನಮ್ಮ ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ ಹಿನ್ನೆಲೆ: ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಸಿಎಂ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ಮೊದಲ ಹಂತದ ಉದ್ಘಾಟನೆಗೆ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿದ್ದಾರೆ.
ಶನಿವಾರ ಈ ಕುರಿತಂತೆ ಪ್ರಧಾನಿಗೆ ಪತ್ರ ಬರೆದಿರುವ ಡಿ.ಕೆ.ಶಿವಕುಮಾರ್, ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋಮೀಟರ್ ಉದ್ದದ ಎತ್ತರಿಸಿದ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲು ದಿನಾಂಕ ನಿಗದಿಪಡಿಸುವಂತೆ ಮನವಿ ಸಲ್ಲಿಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಗುಲಾಬಿ ಮಾರ್ಗ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ಒಂದು ವೇಳೆ ಪ್ರಧಾನಿ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದಿದ್ದರೆ, ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಮಾರ್ಗವನ್ನು ಲೋಕಾರ್ಪಣೆ ಮಾಡುವ ಪರ್ಯಾಯ ಚಿಂತನೆಯೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಮೆಟ್ರೋ ಮಾರ್ಗ: ಗುಲಾಬಿ ಮಾರ್ಗದ ಈ ಎತ್ತರಿಸಿದ ವಿಭಾಗ ಕಾರ್ಯಾರಂಭ ಮಾಡಿದರೆ ಬೆಂಗಳೂರಿನ ನಮ್ಮ ಮೆಟ್ರೋ ಜಾಲದ ಒಟ್ಟು ಉದ್ದ 103.6 ಕಿಲೋಮೀಟರ್ಗೆ ವಿಸ್ತರಣೆಯಾಗಲಿದೆ. ಇದರೊಂದಿಗೆ ಬೆಂಗಳೂರು ದೇಶದಲ್ಲೇ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿರುವ ನಗರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳಲಿದೆ. ಕಾಳೇನ ಅಗ್ರಹಾರ, ಬೊಮ್ಮನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ತಾವರೆಕೆರೆ ಭಾಗದ ಪ್ರಯಾಣಿಕರಿಗೆ ಮೆಟ್ರೋ ಸೇವೆ ಅನುಕೂಲ ಕಲ್ಪಿಸಲಿದೆ. ರಸ್ತೆ ಸಂಚಾರದ ಮೇಲಿನ ಅವಲಂಬನೆ ಕಡಿಮೆಯಾಗುವುದರ ಜತೆಗೆ, ಪ್ರಮುಖ ವಾಣಿಜ್ಯ ಮತ್ತು ವಸತಿ ಪ್ರದೇಶಗಳ ನಡುವಿನ ಪ್ರಯಾಣದ ಸಮಯ ಉಳಿತಾಯವಾಗುವ ನಿರೀಕ್ಷೆಯಿದೆ.