ಬೆಂಗಳೂರು : ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಬ್ಲಾಕ್‍ಮೇಲ್ ತಂತ್ರ, ಬೆದರಿಕೆ ತಂತ್ರವನ್ನು ಅನುಸರಿಸಿ ರಾಜಕೀಯ ಲಾಭ ಪಡೆಯುತ್ತಿರುವುದಾಗಿ ಆರೋಪಿಸಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶನಿವಾರ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಈಗಾಗಲೇ ಕುಮಾರಸ್ವಾಮಿ ಅವರ ರಾಜಕೀಯ ಜೀವನ ಬೆತ್ತಲೆ ಆಗಿರುವುದು ಬಹಿರಂಗವಾಗಿದೆ. ಮೊದಲು ರಾಜ್ಯದ ಕಾಂಗ್ರೆಸ್ ನಾಯಕರ ಕ್ಷಮೆ ಕೋರಿ ರಾಜಕೀಯದಿಂದ ನಿವೃತ್ತರಾಗಿ ಅಲ್ಪಸ್ವಲ್ಪ ಗೌರವವನ್ನು ಉಳಿಸಿಕೊಳ್ಳಿ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ನಾಲಿಗೆಯ ಮೇಲೆ ಹಿಡಿತವಿಲ್ಲದೆ ಹೀನಾಯ ಸಂಸ್ಕೃತಿಯನ್ನು ಅನಾವರಣ ಗೊಳಿಸಿಕೊಂಡಿದ್ದಾರೆ. ಬ್ಲಾಕ್‍ಮೇಲ್ ತಂತ್ರ, ಬೆದರಿಕೆ ತಂತ್ರವನ್ನು ಅನುಸರಿಸಿ ರಾಜಕೀಯ ಲಾಭ ಪಡೆಯುತ್ತಿರುವ ಸಮಯ ಸಾಧಕ ರಾಜಕಾರಣಿ ಎಂದರೆ ಅದು ಎಚ್.ಡಿ.ಕುಮಾರಸ್ವಾಮಿ ಎಂದು ಇಡೀ ದೇಶಕ್ಕೆ ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಅವರ ಹೆಸರು ಹೇಳುವ ಅರ್ಹತೆ ಕುಮಾರಸ್ವಾಮಿ ಅವರಿಗೆ ಇಲ್ಲ. ಹಣ, ಅಧಿಕಾರಕ್ಕಾಗಿ ಯಾವ ಕೀಳು ಮಟ್ಟಕ್ಕೂ ಧುಮುಕುವ ವ್ಯಕ್ತಿ ಎಂದರೆ ಅದು ಕುಮಾರಸ್ವಾಮಿ ಎಂದು ನಾಡಿನ ಜನತೆಗೆ ತಿಳಿದಿದೆ. ಕಾಂಗ್ರೆಸ್ ನಾಯಕರ ಕುರಿತು ಏಕ ವಚನದ ಪದ ಬಳಸುವ ಕುಮಾರಸ್ವಾಮಿ ಅವರು ದೇಶದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಪ್ರತಿಭಟನಾನಿರತರು ತಿಳಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್.ಮನೋಹರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಎ.ಆನಂದ, ಜಿ.ಪ್ರಕಾಶ್, ಪುಟ್ಟರಾಜು, ಲಕ್ಷ್ಮೀನಾರಾಯಣ, ಮುರಳಿ, ಕಿಶೋರ್, ಕುಶಾಲ್ ಹರುವೇಗೌಡ ಮತ್ತಿತರರು ಹಾಜರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor