ಸಾಂದರ್ಭಿಕ ಚಿತ್ರ | PC : Image by redgreystock on Magnific

ಬೆಂಗಳೂರು : ಕರ್ನಾಟಕ ಸರಕಾರದ ವಿವಿಧ ಇಲಾಖೆಗಳು, ಕಚೇರಿಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಸರಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಹಾಜರಾತಿಯನ್ನು ಇನ್ನು ಮುಂದೆ ಕರ್ತವ್ಯ ಆ್ಯಪ್ ಮೂಲಕವೇ ದಾಖಲಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.

ಇಲ್ಲಿಯವರೆಗೆ ಖಾಯಂ ಸರಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಕರ್ತವ್ಯ ಆ್ಯಪ್ ಅನ್ನು, ಇದೀಗ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ವಿಸ್ತರಿಸುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ.

ಸರಕಾರದ ಅಧೀನದಲ್ಲಿರುವ ಎಲ್ಲ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು 2026ರ ನ.25ರೊಳಗಾಗಿ ಕರ್ತವ್ಯ ಆ್ಯಪ್‍ನಲ್ಲಿ ನೋಂದಾಯಿಸಿಕೊಳ್ಳಲು ಆಯಾ ಇಲಾಖಾ ಮುಖ್ಯಸ್ಥರಿಗೆ ಮತ್ತು ಕಚೇರಿಗಳಿಗೆ ಸೂಚಿಸಲಾಗಿದೆ.

ಡಿ.1ರಿಂದ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಯ ಹಾಜರಾತಿಯನ್ನು ಕೇವಲ ಕರ್ತವ್ಯ ಆ್ಯಪ್ ಮಾತ್ರವೇ ದಾಖಲಿಸಬೇಕು. 2027ರ ಜ.1ರಿಂದ ಅನ್ವಯವಾಗುವಂತೆ, ಗುತ್ತಿಗೆ ನೌಕರರ ವೇತನ ಹಾಗೂ ಹೊರಗುತ್ತಿಗೆ ಏಜೆನ್ಸಿಗಳ ಬಿಲ್‍ಗಳನ್ನು ಕರ್ತವ್ಯ ಆ್ಯಪ್‍ನಿಂದ ಪಡೆದ ಹಾಜರಾತಿ ವರದಿಯ ಆಧಾರದ ಮೇಲೆ ಮಾತ್ರ ಬಿಡುಗಡೆ ಮಾಡಲಾಗುವುದು.

ಕರ್ತವ್ಯ ಆ್ಯಪ್‍ನಲ್ಲಿ ಹಾಜರಾತಿ ದಾಖಲಾಗದಿದ್ದರೆ ಯಾವುದೇ ಪಾವತಿ ಮಾಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಪಸ್ತುತ ಕೈಬರಹ ಅಥವಾ ಇತರೆ ಪ್ರತ್ಯೇಕ ವ್ಯವಸ್ಥೆಗಳ ಮೂಲಕ ಹಾಜರಾತಿ ನಿರ್ವಹಿಸಲಾಗುತ್ತಿತ್ತು. ವೇತನವನ್ನು ಸರಕಾರದ ಅನುದಾನದಿಂದಲೇ ಭರಿಸುತ್ತಿರುವುದರಿಂದ ವಿಶ್ವಾಸಾರ್ಹತೆ ಮತ್ತು ಏಕರೂಪತೆ ತರಲು ಈ ನೂತನ ವ್ಯವಸ್ಥೆ ತರಲಾಗಿದೆ.

ಈ ಆದೇಶದ ಪಾಲನೆಯಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಹಾಗೂ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಪ್ರಜಾ ಸೇವಾ ಇಲಾಖೆಯ ಪ್ರದಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor