ಸಾಂದರ್ಭಿಕ ಚಿತ್ರ | PC : PTI

ಬೆಂಗಳೂರು : ರಿಯಲ್ ಎಸ್ಟೇಟ್ ಸಂಸ್ಥೆಯಾದ ಓರೆನ್ ಅರ್ಬನಾ ಇನ್‌ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಾಸುದೇವನ್ ಎಸ್. ಅವರಿಗೆ ಸೇರಿದ 702.70 ಕೋಟಿ ರೂ. ಮೌಲ್ಯದ ಫ್ಲಾಟ್‌ಗಳು, ಜಮೀನು ಸೇರಿ ಸ್ಥಿರ ಆಸ್ತಿಯನ್ನು ಜಾರಿ ನಿರ್ದೇಶನಾಲಯದ(ಈ.ಡಿ.) ಅಧಿಕಾರಿಗಳು ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದಾರೆ.

ಕರ್ನಾಟಕ ಪೊಲೀಸರು ಮತ್ತು ಕೇಂದ್ರೀಯ ತನಿಖಾ ದಳ(ಸಿಬಿಐ) ದಾಖಲಿಸಿದ ಹಲವಾರು ಎಫ್‌ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ತನಿಖೆಯನ್ನು ಪ್ರಾರಂಭಿಸಿದೆ. ಈ ಎಫ್‌ಐಆರ್‌ಗಳಲ್ಲಿ, ವಸತಿ ಯೋಜನೆಗಳನ್ನು ಪೂರ್ಣಗೊಳಿಸದಿರುವುದು, ಬುಕ್ ಮಾಡಿದ ಅಪಾರ್ಟ್‌ಮೆಂಟ್‌ಗಳನ್ನು ಹಸ್ತಾಂತರಿಸದಿರುವುದು ಮತ್ತು ಮನೆ ಖರೀದಿದಾರರಿಂದ ಸಂಗ್ರಹಿಸಿದ ಹಣವನ್ನು ಹಿಂತಿರುಗಿಸದಿರುವುದು ಸೇರಿದಂತೆ, ವಂಚನೆ ಮತ್ತು ಅಪರಾಧ ಪಿತೂರಿಗೆ ಸಂಬಂಧಿಸಿದ ಆರೋಪಗಳನ್ನು ಮಾಡಲಾಗಿದೆ.

ವಾಸುದೇವನ್ ಎಸ್.ಅವರ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿರುವ ‘ಓರೆನ್ ಗ್ರೂಪ್’ ಸಂಸ್ಥೆಗಳು, ಮನೆ ಖರೀದಿದಾರರನ್ನು ಆಕರ್ಷಿಸಲು ಶೂನ್ಯ ಮುಂಗಡ ಪಾವತಿ ಹಾಗೂ ಇತರ ಯೋಜನೆಗಳನ್ನು ಬಳಸಿಕೊಂಡಿವೆ ಎಂದು ಜಾರಿ ನಿರ್ದೇಶನಾಲಯ ನಡೆಸಿದ ತನಿಖೆಯಿಂದ ತಿಳಿದು ಬಂದಿದೆ. ವಸತಿ ಯೋಜನೆಗಳ ಭಾಗವಾಗಿ, ವಸತಿ ಘಟಕಗಳ ಹಸ್ತಾಂತರವಾಗುವವರೆಗೂ ‘ಪ್ರೀ-ಇಎಂಐ’ ಅಥವಾ ‘ಇಎಂಐ’ ಪಾವತಿಗಳನ್ನು ತಾವೇ ಭರಿಸುವುದಾಗಿ ಬಿಲ್ಡರ್ ಭರವಸೆ ನೀಡಿದ್ದರು. ಹಾಗೆಯೇ ವಾಸುದೇವನ್ ಎಸ್. ಹಾಗೂ ಅವರ ಒಡೆತನದ ‘ಓರೆನ್ ಗ್ರೂಪ್’ ಕಂಪೆನಿಯು ಮನೆ ಖರೀದಿದಾರರಿಂದ ಸುಮಾರು 1305.11 ಕೋಟಿ ರೂ.ಗಳಷ್ಟು ಪಡೆದಿದೆ. ಆದರೆ ಖರೀದಿದಾರರಿಗೆ ಅಪಾರ್ಟ್‌ಮೆಂಟ್‌ಗಳನ್ನು ಅಥವಾ ವಸತಿ ಘಟಕಗಳನ್ನು ಹಸ್ತಾಂತರಿಸದೆ, ಆ ಹಣವನ್ನು ತಮ್ಮ ಬಳಿಯೇ ಇರಿಸಿಕೊಂಡು ಬೇರೆಡೆಗೆ ವರ್ಗಾಯಿಸಲಾಗಿದೆ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.

ವರ್ಗಾವಣೆ ಮಾಡಲಾದ ಹಣವನ್ನು ಯೋಜನೆಗಳ ನಿರ್ಮಾಣ ಮತ್ತು ಪೂರ್ಣಗೊಳಿಸುವಿಕೆಗೆ ಬಳಸುವ ಬದಲು, ಸಾಲ ಮರುಪಾವತಿ, ಮರುಹಣಕಾಸು, ಬಡ್ಡಿ ಮತ್ತು ಹಣಕಾಸು ವೆಚ್ಚಗಳು, ಹೂಡಿಕೆದಾರರಿಗೆ ಹಣ ಮರುಪಾವತಿ, ಕಾರ್ಪೊರೇಟ್ ವೆಚ್ಚಗಳು ಮತ್ತು ಇತರ ಹೊಣೆಗಾರಿಕೆಗಳನ್ನು ತೀರಿಸಲು ಬಳಸಲಾಗಿದೆ ಎಂದು ಈ.ಡಿ. ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣದಲ್ಲಿ ಈ ಹಿಂದೆ 423.37 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಪ್ರಸ್ತುತ 702.70 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದಲ್ಲಿ ಜಪ್ತಿ ಮಾಡಿರುವ ಒಟ್ಟು ಆಸ್ತಿಯ ಮೌಲ್ಯವು 1126.07 ಕೋಟಿ ರೂ.ಗೆ ಹೆಚ್ಚಳವಾಗಿದೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಈ.ಡಿ. ಅಧಿಕಾರಿಗಳು ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor