ಸಂವಿಧಾನದ ಘನತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ : ಅದೋನಿ ಸಲೀಂ
ಬೆಂಗಳೂರು : ಭಾರತದ ಸಂವಿಧಾನವು ದೇಶದ ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾನತೆ ಮತ್ತು ಸ್ವಾತಂತ್ರ್ಯದ ಅಡಿಪಾಯವಾಗಿದೆ. ಸಂವಿಧಾನದ ಘನತೆ ಹಾಗೂ ಸ್ಥಾನಮಾನವನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಅದೋನಿ ಸಲೀಂ ಹೇಳಿದ್ದಾರೆ.
ಗುರುವಾರ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ವತಿಯಿಂದ ಸಂವಿಧಾನ ದಿನಾಚರಣೆ ಅಂಗವಾಗಿ ನಗರದ ದಾರುಲ್ ಉಲೂಮ್ ಸಬೀಲರ್ರಶಾದ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸರಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದರೆ ನಾಗರಿಕ ಸಮಾಜ ಪ್ರಶ್ನಿಸಬೇಕು ಮತ್ತು ಪ್ರತಿಭಟಿಸಬೇಕು ಎಂದು ಕರೆ ನೀಡಿದರು.
ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮ ಅಪಾರವಾಗಿದೆ. ಅವರು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ವಿಶೇಷ ಗಮನ ನೀಡಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವ ವ್ಯವಸ್ಥೆ ರೂಪಿಸಿದರು. ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳಿಗೂ ಸಂವಿಧಾನದಲ್ಲಿ ರಕ್ಷಣೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇಸ್ಮಾಯಿಲ್ ಝಬೀಉಲ್ಲಾ ಮಾತನಾಡಿ, ಸಂವಿಧಾನ ದಿನಾಚರಣೆ ಆಚರಿಸುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿಯಾಗಿದೆ. ಯುವ ಸಮೂಹಕ್ಕೆ ಸಂವಿಧಾನದ ಮಹತ್ವ ಮತ್ತು ಅದರ ಆಶಯಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ನಾವು ಸ್ವತಂತ್ರ ಭಾರತದಲ್ಲಿ ಜನಿಸಿರುವುದು ನಮ್ಮ ಅದೃಷ್ಟ. 1947ಕ್ಕೂ ಮೊದಲು ಬ್ರಿಟಿಷರ ಆಡಳಿತದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಶಾಂತಿಯ ವಾತಾವರಣ ಇರಲಿಲ್ಲ ಎಂದು ಹೇಳಿದರು.
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ಮಾರ್ಗದರ್ಶಕ ಸೈಯದ್ ಅಶ್ರಫ್ ಮಾತನಾಡಿ, ಸಂವಿಧಾನ ಸಭೆಯಲ್ಲಿ ಆರಂಭದಲ್ಲಿ 389 ಸದಸ್ಯರಿದ್ದು, ದೇಶ ವಿಭಜನೆಯ ನಂತರ ಸದಸ್ಯರ ಸಂಖ್ಯೆ 299ಕ್ಕೆ ಇಳಿಯಿತು. ಇವರಲ್ಲಿ ಸುಮಾರು 80 ಮಂದಿ ಮುಸ್ಲಿಮರಿದ್ದರು. ಅವರಲ್ಲಿ ಬೇಗಂ ಐಝಾಝ್ ರಸೂಲ್ ಏಕೈಕ ಮುಸ್ಲಿಂ ಮಹಿಳಾ ಸದಸ್ಯೆಯಾಗಿದ್ದರು. ನಮ್ಮ ರಾಜ್ಯದಿಂದಲೂ ಎಂಟು ಮಂದಿ ಸಂವಿಧಾನ ಸಭೆಯ ಸದಸ್ಯರಾಗಿದ್ದರು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಕರ್ನಾಟಕದ ರಾಜ್ಯಾಧ್ಯಕ್ಷ ಮುಫ್ತಿ ಅಹ್ಮದ್ ಸಿಮಾಲ್ ವಹಿಸಿದ್ದರು. ಕೆಪಿಸಿಸಿ ಉಪಾಧ್ಯಕ್ಷ ಮುಹಮ್ಮದ್ ಉಬೇದುಲ್ಲಾ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫಯಾಝ್ ಶರೀಫ್, ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ಸುಲೇಮಾನ್ ಖಾನ್, ಮುಖಂಡರಾದ ಆಸೀಮ್ ಸಿರಾಜ್ ಸೇಠ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಅಡ್ವೊಕೇಟ್ ಅಯ್ಯೂಬ್ ಅಹ್ಮದ್ ಖಾನ್ ಸಂವಿಧಾನ ಪೀಠಿಕೆ ಬೋಧಿಸಿದರು.