ಸಾಂದರ್ಭಿಕ ಚಿತ್ರ

ಬೆಂಗಳೂರು : ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೌಡಿ ನಿಗ್ರಹ ದಳದ ಪೊಲೀಸರು ಏಕಕಾಲದಲ್ಲಿ 30ಕ್ಕೂ ಹೆಚ್ಚು ಸ್ಥಳಗಳನ್ನು ಪರಿಶೀಲಿಸಿದ್ದು, ವಿವಿಧ ಪ್ರಕರಣಗಳಲ್ಲಿ ಬಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಒಂಬತ್ತು ಮಂದಿ ರೌಡಿಗಳನ್ನು ಬಂಧಿಸಿದ್ದಾರೆ.

ಪನ್ನೀರ್ ಸೇಲ್ವಂ ಅಲಿಯಾಸ್ ತಮಿಳು ಪ್ರಭು, ಶಶಿಕುಮಾರ್ ಅಲಿಯಾಸ್ ಶಶಿ, ನರಸಿಂಹಮೂರ್ತಿ ಅಲಿಯಾಸ್ ಕೊಸೆ, ಸಾಧಿಕ್ ಪಾಷಾ ಅಲಿಯಾಸ್ ಬಿರಿಯಾನಿ, ಅವೆಜ್ ಅಲಿಯಾಸ್ ಮುಹಮ್ಮದ್ ಅಲಿ, ಮಣಿರಾಜ್ ಅಲಿಯಾಸ್ ಮಣಿ, ರಾಜು ಅಲಿಯಾಸ್ ಕರಿಯ ರಾಜು, ಆಯುಬ್ ಖಾನ್, ಸತೀಶ್ ಕುಮಾರ್ ಬಂಧಿತ ರೌಡಿಶೀಟರ್‌ ಗಳು ಎಂದು ಗುರುತಿಸಲಾಗಿದೆ.

ಪೀಣ್ಯ ಪೊಲೀಸ್ ಠಾಣೆಯ ರೌಡಿಶೀಟರ್ ಪನ್ನೀರ್ ಸೇಲ್ವಂ ವಿರುದ್ಧ ಪೀಣ್ಯ, ಮಲ್ಲೇಶ್ವರಂ, ಮಹಾಲಕ್ಷ್ಮೀ ಲೇಔಟ್, ಚಾಮರಾಜಪೇಟೆ, ಜೆ.ಜೆ. ನಗರ, ವಿಜಯನಗರ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಕೊಲೆ, ಕೊಲೆಯತ್ನ, ದರೋಡೆ ಮತ್ತು ರಾಬರಿ ಪ್ರಕರಣಗಳು ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿದ್ದವು. ಪೀಣ್ಯ ಪೊಲೀಸ್ ಠಾಣೆಯ ರೌಡಿಶೀಟರ್ ಶಶಿಕುಮಾರ್ ಕೊಲೆಯತ್ನ ಪ್ರಕರಣದಲ್ಲಿ ಶಾಮೀಲಾಗಿದ್ದ ಆರೋಪಿಯಾಗಿದ್ದಾನೆ. ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗಿರಿನಗರ ಪೊಲೀಸ್ ಠಾಣೆಯ ರೌಡಿಶೀಟರ್ ನರಸಿಂಹಮೂರ್ತಿ ವಿರುದ್ಧ ಒಟ್ಟು 4 ಪ್ರಕರಣಗಳು ದಾಖಲಾಗಿರುತ್ತವೆ. ಪ್ರಕರಣಗಳಲ್ಲಿ ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು ಒಂದುವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಾರಣ, ನ್ಯಾಯಾಲಯವು ಆತನ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿ ಆದೇಶಿಸಿದೆ. ಹೀಗಾಗಿ ರೌಡಿ ನಿಗ್ರಹ ದಳದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಿದ್ದಾಪುರ ಪೊಲೀಸ್ ಠಾಣೆಯ ರೌಡಿಶೀಟರ್ ಸಾಧಿಕ್ ಪಾಷಾ ವಿರುದ್ಧ ಸಿದ್ದಾಪುರ, ತಿಲಕ್‍ನಗರ ಪೊಲೀಸ್ ಠಾಣೆಗಳಲ್ಲಿ ಕೊಲೆಗೆ ಯತ್ನ, ಹಲ್ಲೇ, ಕಳ್ಳತನ ಹಾಗೂ ಇತರೆ ಪ್ರಕರಣಗಳು ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ ಸಿದ್ದಾಪುರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕಾರಣ, ನ್ಯಾಯಾಲಯವು ಆರೋಪಿ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಹೀಗಾಗಿ ರೌಡಿ ನಿಗ್ರಹ ದಳದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಜೆಜೆನಗರದ ಮುಹಮ್ಮದ್ ಅಲಿ ಕೊಲೆಯತ್ನ, ದರೋಡೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳಲ್ಲಿ ಶಾಮೀಲಾಗಿದ್ದು, ಈತನ ವಿರುದ್ಧ ಒಟ್ಟು ಒಂಬತ್ತು ಪ್ರಕರಣಗಳಿವೆ. ಜೆಜೆನಗರ ಮತ್ತು ಮಾಗಡಿ ರಸ್ತೆ ಪೊಲೀಸ್ ಠಾಣೆಗಳಲ್ಲಿ ಮಣಿರಾಜ್ ವಿರುದ್ಧ ಒಂದು ಕೊಲೆ ಪ್ರಕರಣ ಸೇರಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಇವರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ರಾಜಗೋಪಾಲ್ ನಗರದ ರೌಡಿಶೀಟರ್ ಅಯೂಬ್ ಖಾನ್ ಕೊಲೆಯತ್ನ, ದರೋಡೆ ಮತ್ತು ಡಕಾಯಿತಿ ಸೇರಿದಂತೆ ಒಟ್ಟು ಒಂಬತ್ತು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇದೇ ಪ್ರದೇಶದಲ್ಲಿ 28 ಪ್ರಕರಣಗಳಲ್ಲಿ ಶಾಮೀಲಾಗಿದ್ದ ರೌಡಿಶೀಟರ್ ರಾಜುನನ್ನು ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಕೋಣನಕುಂಟೆಯ ರೌಡಿಶೀಟರ್ ಸತೀಶ್ ಕುಮಾರ್ ವಿರುದ್ಧ ಒಟ್ಟು 11 ಪ್ರಕರಣಗಳಿವೆ. ಬೆಂಗಳೂರಿನ ಏಳು ಪೊಲೀಸ್ ಠಾಣೆಗಳು ಹಾಗೂ ಹಾಸನ ಜಿಲ್ಲೆಯ ಎರಡು ಪ್ರಕರಣ ಸೇರಿ ಒಟ್ಟು ಒಂಬತ್ತು ಪೊಲೀಸ್ ಠಾಣೆಗಳಲ್ಲಿ ಆರೋಪಿಯ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹಲ್ಲೆ, ಲೈಂಗಿಕ ದೌರ್ಜನ್ಯ ಮತ್ತು ವಂಚನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸತೀಶ್ ಕುಮಾರ್‍ನನ್ನು ಬಂಧಿಸಲಾಗಿದೆ ಎಂದು ರೌಡಿ ನಿಗ್ರಹ ದಳದ ಪೊಲೀಸರು ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor