ಬೆಂಗಳೂರಿನಲ್ಲಿ 30.43 ಕೋಟಿ ರೂ.ಮೌಲ್ಯದ ಮಾದಕ ಪದಾರ್ಥಗಳು ಜಪ್ತಿ; ಐವರು ವಿದೇಶಿ ಪ್ರಜೆಗಳು ಸೇರಿ 8 ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ | PC : gemini AI
ಬೆಂಗಳೂರು : ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಕಳ್ಳಸಾಗಣೆಯ ಬೃಹತ್ ಜಾಲವನ್ನು ಪತ್ತೆ ಮಾಡಿರುವ ಬೆಂಗಳೂರು ನಗರ ಪೊಲೀಸರು, ಐವರು ವಿದೇಶಿ ಪ್ರಜೆಗಳು ಸೇರಿ 8 ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 30.43 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಬ್ಬಾಳ ಪೊಲೀಸರು ಮೂರು ವಿದೇಶಿಯರು ಸೇರಿ 5 ಜನ ಆರೋಪಿಗಳನ್ನು ಬಂಧಿಸಿದ್ದು, 17 ಕೋಟಿ ರೂ. ಮೌಲ್ಯದ 17 ಕೆಜಿ ಎಂಡಿಎಂಎ ನಿಷೇಧಿತ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಇಬ್ಬರು ವಿದೇಶಿ ಪ್ರಜೆಗಳು ಸೇರಿ ಮೂರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, 6 ಕೆಜಿ ಎಂಡಿಎಂಎ, 20 ಗ್ರಾಂ ಕೋಕೇನ್ ಅನ್ನು ವಶಕ್ಕೆ ಪಡೆದಿದ್ದಾರೆ. ಗಿರಿನಗರ ಪೊಲೀಸ್ ಠಾಣಾ ಪೊಲೀಸರು ಓರ್ವ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು, 5 ಕೆಜಿ ಎಂಡಿಎಂಎ ಅನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು 29 ಕೆಜಿ ಎಂಡಿಎಂಎ, 20 ಗ್ರಾಂ ಕೋಕೇನ್ ಹಾಗೂ 1 ಸಾವಿರ ಎಕ್ಸ್ ಟೆಸಿ ಪಿಲ್ಸ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ವರ್ಷ 221.27 ಕೋಟಿ ಮೌಲ್ಯದ ಮಾದಕ ಜಪ್ತಿ: 2026ರಲ್ಲಿ ನಗರದದ್ಯಂತ ಒಟ್ಟು 2,936 ಎನ್‍ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕರ್ನಾಟಕ ಹಾಗೂ ಅನ್ಯ ರಾಜ್ಯಗಳ 3,840 ಹಾಗೂ 37 ವಿದೇಶಿ ಪ್ರಜೆಗಳನ್ನು ಬಂಧಿಸಿದ್ದು, ಬಂಧಿತರಿಂದ 221 ಕೋಟಿ ರೂ. ಮೌಲ್ಯದ ಒಟ್ಟು 1415 ಕೆಜಿ ತೂಕದ ವಿವಿಧ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ತಿಂಗಳಿನಿಂದ ಎನ್‍ಡಿಪಿಎಸ್ ಕಾಯ್ದೆಯಡಿ 565 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 729 ಭಾರತೀಯ ಹಾಗೂ 11 ವಿದೇಶಿ ಪ್ರಜೆಗಳನ್ನ ಬಂಧಿಸಲಾಗಿದೆ. ಅವರಿಂದ 50.43 ಕೋಟಿ ರೂ. ಮೌಲ್ಯದ 205.566 ಕೆ.ಜಿ ತೂಕದ ವಿವಿಧ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ರೈಸ್ ಅಭಿಯಾನ’ ದಿನದಿಂದ(ಜು.1) ಎನ್‍ಡಿಪಿಎಸ್ ಕಾಯ್ದೆಯಡಿ 135 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 156 ಭಾರತೀಯ ಹಾಗೂ ಐವರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. 32.28 ಕೋಟಿ ರೂ. ಮೌಲ್ಯದ 49 ಕೆಜಿ ವಿವಿಧ ಮಾದರಿಯ ನಿಷೇಧಿತ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.