ಕಡ್ಡಾಯವಾಗಿ ಎಸ್‍ಸಿ/ಎಸ್‍ಟಿ ಪೊಲೀಸ್ ಸಿಬ್ಬಂದಿಯ ಕುಂದುಕೊರತೆಗಳ ಸಭೆ ನಡೆಸಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪಂಗಡದ(ಎಸ್‍ಸಿ/ಎಸ್‍ಟಿ) ಪೊಲೀಸ್ ಸಿಬ್ಬಂದಿಯ ಕುಂದುಕೊರತೆಗಳ ಸಭೆ ನಡೆಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಎರಡನೇ ರವಿವಾರದಂದು ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದಿನ’ವನ್ನು ಕಡ್ಡಾಯವಾಗಿ ಆಚರಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಎಲ್ಲ ಪೊಲೀಸ್ ಘಟಕಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ರಾಜ್ಯದ ವಿವಿಧ ಪೊಲೀಸ್ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಎಸ್‍ಸಿ/ಎಸ್‍ಟಿ) ಸಮುದಾಯದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಸೇವಾ ಸಂಬಂಧಿತ ಸಮಸ್ಯೆಗಳು, ಕುಂದುಕೊರತೆಗಳು ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಲು ಕ್ರಮ ವಹಿಸಬೇಕು. ಕುಂದುಕೊರತೆಗಳ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.
ಮೂಲಕ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತಾಲಯಗಳು, ಜಿಲ್ಲಾ ಪೊಲೀಸ್ ಕಚೇರಿಗಳು, ಸಶಸ್ತ್ರ ಮೀಸಲು ಪಡೆಗಳು, ವಿಶೇಷ ಪೊಲೀಸ್ ಘಟಕಗಳು ಹಾಗೂ ಇತರೆ ಎಲ್ಲಾ ಪೊಲೀಸ್ ಸಂಸ್ಥೆಗಳಲ್ಲಿ ಪ್ರತಿ ತಿಂಗಳ ಎರಡನೇ ಭಾನುವಾರದಂದು ಎಸ್‍ಸಿ/ಎಸ್‍ಟಿ ಸಮುದಾಯದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಕುಂದುಕೊರತೆಗಳ ಆಲಿಕೆ ಸಭೆ ನಡೆಸಲು ಸೂಚನೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಈ ಬಗ್ಗೆ 2015ರಲ್ಲೇ ಆದೇಶ ಹೊರಡಿಸಲಾಗಿದೆ. ಆದರೆ, ಹಲವು ಕಡೆಗಳಲ್ಲಿ ಈ ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ ಎಂಬ ಮಾಹಿತಿ ಸರಕಾರದ ಗಮನಕ್ಕೆ ಬಂದಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯದ ಪೊಲೀಸ್ ಸಿಬ್ಬಂದಿಯವರ ಸಮಸ್ಯೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ರೂಪಿಸಲಾಗಿರುವ ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಾಗುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.