ಬೆಂಗಳೂರು : ಪ್ರಜಾಪ್ರಭುತ್ವದ ಬುನಾದಿಯೇ ಚುನಾವಣೆ. ಆದರೆ, ಇಂದು ವೋಟು ಮತ್ತು ನೋಟು ಒಂದಾಗುತ್ತಿರುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ತೊಲಗಿಸಲು ಮುಂದಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕರೆ ನೀಡಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿ ಕಾನೂನು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಹಾಗೂ ‘ಸಂವಿಧಾನ ಮತ್ತು ಪ್ರಸ್ತುತ ರಾಜಕಾರಣ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನ ಮತಕ್ಕೂ ಸಮಾನ ಮೌಲ್ಯವಿದೆ. ಇದು ಸಂವಿಧಾನ ನಮಗೆ ನೀಡಿರುವ ಅತ್ಯಂತ ದೊಡ್ಡ ಶಕ್ತಿ. ಆದರೆ ಇಂದು ವೋಟು ಮತ್ತು ನೋಟು ಒಂದಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ವೋಟು ಮತ್ತು ನೋಟುಗಳನ್ನು ಬೇರ್ಪಡಿಸಿದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಲು ಸಾಧ್ಯ. ಸಂವಿಧಾನದ ಆಶಯಗಳನ್ನು ಪಾಲಿಸದಿದ್ದರೆ ಅದರ ಪರಿಣಾಮ ಎದುರಿಸಬೇಕಾಗಿರುವುದು ದೇಶದ ಸಾಮಾನ್ಯ ನಾಗರಿಕರು ಎಂದು ಎಚ್ಚರಿಸಿದರು.

ಸಂವಿಧಾನ ರಚನೆಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅವರು ಅತ್ಯಂತ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಂವಿಧಾನ ಸಲಹೆಗಾರರಾಗಿದ್ದ ಬಿ.ಎನ್.ರಾವ್ ಅವರು ಸಂವಿಧಾನ ರಚನಾ ಪ್ರಕ್ರಿಯೆಗೆ ನೆರವಾಗಿದ್ದರು. ಆದರೆ, ಅಂಬೇಡ್ಕರ್ ಅವರಿಗೆ ಸಂವಿಧಾನ ರಚಿಸಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ ಎಂಬ ಸುಳ್ಳುಗಳನ್ನು ಸಂಘ ಪರಿವಾರದವರು ಹರಡುತ್ತಿದ್ದಾರೆ. ಭಾರತೀಯರಲ್ಲಿಯೇ ಸಂವಿಧಾನ ರಚಿಸುವ ಸಾಮಥ್ರ್ಯ ಹೊಂದಿರುವ ಪ್ರತಿಭಾವಂತರಿದ್ದಾರೆ ಎಂಬ ವಿಶ್ವಾಸ ಸ್ವಾತಂತ್ರ್ಯ ಹೋರಾಟದ ನಾಯಕರಿಗಿತ್ತು. ಅಂಬೇಡ್ಕರ್ ಅವರ ಅಗಾಧ ಪಾಂಡಿತ್ಯ ಮತ್ತು ಜ್ಞಾನವನ್ನು ದೇಶದ ಸಂವಿಧಾನ ರಚನೆಗೆ ಬಳಸಿಕೊಳ್ಳಲಾಯಿತು ಎಂದು ಹೇಳಿದರು.

ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡುವುದೇ ಸಮಾಜವಾದದ ಮೂಲ ಉದ್ದೇಶ. ಆದರೆ ಸಂವಿಧಾನ ವಿರೋಧಿಗಳು ಸಮಾಜವಾದದ ಆಶಯಗಳನ್ನೂ ವಿರೋಧಿಸುತ್ತಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆ ಸಮಾಜದ ದುರ್ಬಲ ವರ್ಗಗಳ ಹಿತವನ್ನು ಕಾಪಾಡುವಂತಿರಬೇಕು. ಧರ್ಮಪ್ರಭುತ್ವ, ರಾಜಪ್ರಭುತ್ವ ಹಾಗೂ ಸರ್ವಾಧಿಕಾರಿ ಆಡಳಿತ ವ್ಯವಸ್ಥೆಗಳನ್ನು ದಾಟಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಲುಪಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಸರ್ವಸ್ವ. ಸರ್ಕಾರವನ್ನು ರಚಿಸುವ ಹಾಗೂ ಅಧಿಕಾರದಿಂದ ಕೆಳಗಿಳಿಸುವ ಶಕ್ತಿಯನ್ನು ಪ್ರಜೆಗಳಿಗೆ ಸಂವಿಧಾನ ನೀಡಿದೆ ಎಂದು ಅವರು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯಸಚೇತಕ ಮಂಜುನಾಥ್ ಭಂಡಾರಿ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ್, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

..................

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor