ಬೆಂಗಳೂರು : ಕರ್ನಾಟಕ ಕೇಡರ್‌ ಗೆ ನಿಯೋಜನೆಗೊಂಡಿರುವ 78ನೇ ಆರ್‌ ಆರ್ (2025ನೇ ಬ್ಯಾಚ್) ಐದು ಮಂದಿ ಐಪಿಎಸ್ ಪ್ರೊಬೇಷನರ್‍ಗಳಾದ ಸಂಪ್ರೀತ್ ಸಂತೋಷ್‌, ರಾಹುಲ್ ಸಿ ಯರಂತೇಲಿ, ಸೌಭಾಗ್ಯ ಎಸ್ ಬೀಳಗಿಮಠ, ಅಭಿನವ್ ಶರ್ಮಾ ಮತ್ತು ಅಭಿಲಾಷ್‌ ಸುಂದರಂ ಅವರು ಬುಧವಾರ ವಿಧಾನಸೌಧದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದರು.

ನೂತನ ಅಧಿಕಾರಿಗಳನ್ನು ಕರ್ನಾಟಕ ಕೇಡರ್‍ಗೆ ಆತ್ಮೀಯವಾಗಿ ಸ್ವಾಗತಿಸಿದ ಮುಖ್ಯ ಕಾರ್ಯದರ್ಶಿ, ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮೊದಲ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಜನರ ಕುಂದು-ಕೊರತೆಗಳ ಕುರಿತು ಸಹಾನುಭೂತಿ ಹಾಗೂ ಸಂವೇದನಾಶೀಲತೆಯಿಂದ ಸ್ಪಂದಿಸುವಂತೆ ಮತ್ತು ಆಧುನಿಕ ತಂತ್ರಜ್ಞಾನ ಹಾಗೂ ನವೀನ ಆಲೋಚನೆಗಳಿಗೆ ತಕ್ಕಂತೆ ನಿರಂತರವಾಗಿ ನವೀಕೃತವಾಗಿರುವಂತೆ ಅವರು ಮಾರ್ಗದರ್ಶನ ನೀಡಿದರು.

ಸಾರ್ವಜನಿಕರೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಬೆರೆಯಲು ಹಾಗೂ ಜನರನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಕನ್ನಡ ಭಾಷೆಯನ್ನು ಕಲಿಯುವ ಮಹತ್ವವನ್ನು ಮುಖ್ಯ ಕಾರ್ಯದರ್ಶಿ ವಿಶೇಷವಾಗಿ ಒತ್ತಿ ಹೇಳಿದರು. ಅಲ್ಲದೆ, ಈ ಐವರು ಐಪಿಎಸ್ ಪ್ರೊ ಬೇಷನರ್‍ಗಳಲ್ಲಿ ಮೂವರು ಕರ್ನಾಟಕದವರೇ ಆಗಿರುವುದು ಸಂತಸದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನೂತನ ಐಪಿಎಸ್ ಪ್ರೊ ಬೇಷನರ್‍ಗಳು ಕರ್ನಾಟಕ ಕೇಡರ್‍ನಲ್ಲಿ ಜನಪರ, ಪಾರದರ್ಶಕ ಮತ್ತು ದಕ್ಷ ಪೊಲೀಸ್ ಸೇವೆ ಸಲ್ಲಿಸುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಮುಖ್ಯ ಕಾರ್ಯದರ್ಶಿಯು ಎಲ್ಲ ವೃತ್ತಿಪರರಿಗೆ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು. ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಸ್ವತಃ ಅವರೇ ಬರೆದ ‘ಸುಸ್ಥಿರ ಬದುಕಿನ ಆಶಾಕಿರಣ' ಎಂಬ ಪುಸ್ತಕವನ್ನು ಮಂಡ್ಯದ ಸಂಪ್ರೀತ್ ಅವರಿಗೆ ನೀಡಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor