ಸಾಂದರ್ಭಿಕ ಚಿತ್ರ | PC : Image by magnific

ಬೆಂಗಳೂರು : ರಾಜ್ಯದ ಗಣಿ ಬಾಧಿತ ಪ್ರದೇಶಗಳ 15 ವರ್ಷ ವಯೋಮಾನದ ಹೆಣ್ಣುಮಕ್ಕಳಿಗೂ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಎಚ್‍ಪಿವಿ ಲಸಿಕೆಯನ್ನು ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ.

2025-26ನೇ ಸಾಲಿನ ಆಯವ್ಯಯದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಪ್ರಥಮ ಹಂತದಲ್ಲಿ ಗಣಿ ಬಾಧಿತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದ 20 ತಾಲೂಕುಗಳ 14 ವರ್ಷದ ಹೆಣ್ಣುಮಕ್ಕಳಿಗೆ 9 ಕೋಟಿ ರೂ. ವೆಚ್ಚದಲ್ಲಿ ಎಚ್‍ಪಿವಿ ಲಸಿಕೆ ನೀಡುವುದಾಗಿ ಘೋಷಿಸಲಾಗಿತ್ತು. ಅದರ ಭಾಗಶಃ ಅನುಷ್ಠಾ ನವಾಗಿ, ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ 4.54 ಕೋಟಿ ರೂ. ಅನುದಾನದಲ್ಲಿ 4 ಜಿಲ್ಲೆಗಳ 10 ತಾಲೂಕುಗಳಲ್ಲಿ 14 ವರ್ಷದ ಹೆಣ್ಣುಮಕ್ಕಳಿಗೆ ಲಸಿಕೆ ನೀಡಲು 2025ರ ಜು.17ರಂದು ಅನುಮೋದನೆ ನೀಡಲಾಗಿತ್ತು.

ಆದರೆ, 2026ರ ಫೆ.28ರಿಂದ ಕೇಂದ್ರ ಸರಕಾರವೇ ದೇಶಾದ್ಯಂತ 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ ಎಚ್‍ಪಿವಿ ಲಸಿಕಾ ಅಭಿಯಾನವನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪುನರಾವರ್ತನೆಯನ್ನು ತಪ್ಪಿಸಲು ಹಾಗೂ ವಿಶ್ವ ಆರೋಗ್ಯ ಸಂಸ್ಥೆ, ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮತ್ತು ರಾಜ್ಯ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸುಗಳ ಅನ್ವಯ 15 ವರ್ಷದ ಹೆಣ್ಣುಮಕ್ಕಳಿಗೂ ಲಸಿಕೆ ನೀಡಲು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು.

ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಅನುಮೋದನೆ ನೀಡಿರುವ ಸರಕಾರ, ತುಮಕೂರು ಜಿಲ್ಲೆಯ ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು, ಬಳ್ಳಾರಿ, ಸಂಡೂರು, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು ಹಾಗೂ ಹೊಸಪೇಟೆ ತಾಲೂಕುಗಳ 14 ವರ್ಷದ ಬಾಲಕಿಯರೊಂದಿಗೆ 15 ವರ್ಷ ವಯೋಮಾನದ ಹೆಣ್ಣುಮಕ್ಕಳಿಗೂ ಕೆಎಂಇಆರ್‍ಸಿ ಅನುದಾನದಡಿ ಎಚ್‍ಪಿವಿ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ವಿನೋಧ್ ಕುಮಾರ್ ಡಿ.ಎಂ. ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor