Bengaluru | ಪ್ರತ್ಯೇಕ ಪ್ರಕರಣ; ಚಿನ್ನಾಭರಣ ಕಳವು ಮಾಡಿದ್ದ ಮೂವರು ಆರೋಪಿಗಳು ಸೆರೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಬೆಂಗಳೂರಿನ ಪೊಲೀಸರು, ಸುಮಾರು ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ.
ಬನಶಂಕರಿ ನಿವಾಸಿ ಭರತ್ ಕುಮಾರ್(25), ಜೆ.ಪಿ ನಗರದ 5ನೇ ಹಂತದ ನಿವಾಸಿ ಸತೀಶ್ ಕುಮಾರ್(24) ಹಾಗೂ ಚಾಮರಾಜಪೇಟೆಯ ವಾಲ್ಮೀಕಿನಗರ ನಿವಾಸಿ ಯಾಸೀನ್ ಖಾನ್(39) ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲ ಪ್ರಕರಣದಲ್ಲಿ ಲಕ್ಕಸಂದ್ರದ ನಿವಾಸಿ ಶ್ರೀನಿವಾಸ್ ಎಂಬುವವರು ಸಂಬಂಧಿಕರೊಬ್ಬರ ಕಾರ್ಯಕ್ರಮವೊಂದಕ್ಕೆ ಹೋಗಿ, ವಾಪಸ್ ಬಂದು ನೋಡಿದಾಗ, ಯಾರೋ ಅಪರಿಚಿತರು ಮನೆಯ ಬಾಗಿಲ ಬೀಗವನ್ನು ಹೊಡೆದು, ಒಳ ಪ್ರವೇಶಿಸಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆಡುಗೋಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ಠಾಣೆಯಲ್ಲಿ ಹಗಲು ಕನ್ನ ಕಳವು ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆಹಾಕಿ, ಶ್ರೀನಗರದ ಬಸ್ ನಿಲ್ದಾಣದ ಬಳಿ ಆರೋಪಿಗಳಾದ ಭರತ್ ಕುಮಾರ್ ಮತ್ತು ಸತೀಶ್ ಕುಮಾರ್ನನ್ನು ಒಂದು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ. ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಕಳವು ಮಾಡಿದ ಚಿನ್ನಾಭರಣಗಳನ್ನು ತಮಿಳುನಾಡಿನ ವ್ಯಕ್ತಿಯೋರ್ವನ ಸಹಾಯದಿಂದ ಕೃಷ್ಣಗಿರಿ ಮತ್ತು ಹೊಸೂರಿನ ಚಿನ್ನದ ಅಂಗಡಿಗಳಲ್ಲಿ ಮಾರಾಟ ಮಾಡಿದ್ದಾರೆ. ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ 57 ಲಕ್ಷ ರೂ.ಗಳ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎರಡನೇ ಪ್ರಕರಣದಲ್ಲಿ ಮೂಡಲಪಾಳ್ಯದ ನಿವಾಸಿಯೊಬ್ಬ ತಮ್ಮ ಮನೆಯ ಬಾಗಿಲಿಗೆ ಬೀಗವನ್ನು ಹಾಕಿಕೊಂಡು ಸ್ವಂತ ಊರಿಗೆ ಹೋಗಿದ್ದಾಗ, ಯಾರೋ ಅಪರಿಚಿತರು ಮನೆಯ ಬಾಗಿಲ ಬೀಗವನ್ನು ಹೊಡೆದು, ಬೀರುವಿನಲ್ಲಿದ್ದ ಚಿನ್ನಾಭರಣಗಳು, ನಗದು ಮತ್ತು ಬೆಳ್ಳಿ ದೀಪಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಗೋವಿಂದರಾಜನಗರ ಪೊಲೀಸರು, ಕೆ.ಆರ್.ಪುರಂ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಭಾಗಿಯಾಗಿ ಕೇಂದ್ರ ಕಾರಾಗೃದಲ್ಲಿದ್ದ ಆರೋಪಿಯನ್ನು ಬಾಡಿ ವಾರೆಂಟ್ ಪಡೆದು 13 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಆರೋಪಿಯು ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ನೀಡಿದ ಮಾಹಿತಿಯನ್ನು ಆಧರಿಸಿ, ಮುಂಬೈ, ಹೈದರಾಬಾದ್ ಹಾಗೂ ಕಲಬುರಗಿಯ ಜ್ಯೂವೆಲ್ಲರಿ ಅಂಗಡಿಗಳಿಂದ 44.70 ಲಕ್ಷ ರೂ. ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.