ಸಾಂದರ್ಭಿಕ ಚಿತ್ರ

ಬೆಳಗಾವಿ : ರಾಜ್ಯದ ಶಾಸನ ರಚನೆಯ ಕೇಂದ್ರವಾದ ಬೆಳಗಾವಿಯ ಸುವರ್ಣ ವಿಧಾನಸೌಧದ ಅಂಗಳದಲ್ಲಿ ಐದು ದಿನಗಳ ಕಾಲ ಅಕ್ಷರಗಳ ಹಬ್ಬ ನಡೆಯಲಿದೆ. ಓದುವ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಓದುಗರು, ಲೇಖಕರು ಮತ್ತು ಪ್ರಕಾಶಕರನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಉದ್ದೇಶದಿಂದ ವಿಧಾನಮಂಡಲದ ವತಿಯಿಂದ ಡಿ.7ರಿಂದ 11ರವರೆಗೆ ‘ಪುಸ್ತಕೋತ್ಸವ- ಪುಟಗಳತ್ತ ಪಯಣ’ ಆಯೋಜಿಸಲಾಗಿದೆ.

ಸುವರ್ಣ ವಿಧಾನಸೌಧದ ಪ್ರವೇಶದ್ವಾರದ ಬಳಿ ನಡೆಯಲಿರುವ ಈ ಪುಸ್ತಕೋತ್ಸವದಲ್ಲಿ ನಾಡಿನ ಹೆಸರಾಂತ ಲೇಖಕರು, ಕವಿಗಳು, ಚಿಂತಕರು, ಪ್ರಕಾಶಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಲಿದ್ದಾರೆ. ಪುಸ್ತಕ ಖರೀದಿಯ ಜೊತೆಗೆ ಲೇಖಕರೊಂದಿಗೆ ಸಂವಾದ ನಡೆಸಲು, ಸಾಹಿತ್ಯದ ಕುರಿತು ಚರ್ಚಿಸಲು ಹಾಗೂ ಹೊಸ ಕೃತಿಗಳನ್ನು ಪರಿಚಯಿಸಿಕೊಳ್ಳಲು ಓದುಗರಿಗೆ ಅವಕಾಶ ಕಲ್ಪಿಸುವುದು ಉತ್ಸವದ ವಿಶೇಷತೆಯಾಗಿದೆ.

ಐದು ದಿನಗಳ ಉತ್ಸವದಲ್ಲಿ ಕವಿಗೋಷ್ಠಿ, ಲೇಖಕರೊಂದಿಗೆ ಸಂವಾದ, ಹೊಸ ಪುಸ್ತಕಗಳ ಲೋಕಾರ್ಪಣೆ ಮತ್ತು ಪರಿಚಯ, ವಿಚಾರ ಸಂಕಿರಣ, ಹಾಸ್ಯ ಹಾಗೂ ವೈವಿಧ್ಯಮಯ ಸಾಂಸ್ಕೃ ತಿಕ ಕಾರ್ಯಕ್ರಮಗಳು ನಡೆಯಲಿವೆ.

ಪುಸ್ತಕ ಮಳಿಗೆ ತೆರೆಯಲು ಆಹ್ವಾನ: ಉತ್ಸವದಲ್ಲಿ 100ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಓದುಗರಿಗೆ ರಿಯಾಯಿತಿ ದರದಲ್ಲಿ ಪುಸ್ತಕಗಳು ಲಭ್ಯವಾಗಲಿವೆ. ರಾಜ್ಯದ ವಿವಿಧ ಭಾಗಗಳ ಪ್ರಕಾಶಕರು, ಪುಸ್ತಕ ಮಾರಾಟಗಾರರು, ಸ್ವತಂತ್ರ ಲೇಖಕರು ಹಾಗೂ ಸಾಹಿತ್ಯ ಸಂಸ್ಥೆಗಳು ಪುಸ್ತಕ ಮಳಿಗೆಗಳನ್ನು ತೆರೆದು ತಮ್ಮ ಕೃತಿಗಳನ್ನು ಓದುಗರಿಗೆ ತಲುಪಿಸಲು ಆಹ್ವಾನಿಸಲಾಗಿದೆ. ಆಸಕ್ತರು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು.

ವಿಶೇಷವಾಗಿ ಮಕ್ಕಳು ಮತ್ತು ಯುವಜನರಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸಲು ಈ ಉತ್ಸವ ಉತ್ತಮ ವೇದಿಕೆಯಾಗಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ತಂಡಗಳು ಸಹ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಪುಸ್ತಕೋತ್ಸವಕ್ಕೆ ಸರ್ವರಿಗೂ ಮುಕ್ತ ಪ್ರವೇಶವಿದ್ದು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ. ಪುಸ್ತಕ ಮಳಿಗೆಗಳ ನೋಂದಣಿ, ವಿದ್ಯಾರ್ಥಿಗಳ ತಂಡಗಳ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 99452 29340, 97429 28778 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

ಪ್ರಜಾಪ್ರಭುತ್ವದ ಬಲ ಇರುವುದು ಜಾಗೃತ ಮತ್ತು ವಿಚಾರವಂತ ನಾಗರಿಕರಲ್ಲಿ. ಅಂತಹ ನಾಗರಿಕರನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಬಹಳ ದೊಡ್ಡದು. ಶಾಸನಗಳನ್ನು ರೂಪಿಸುವ ಸುವರ್ಣ ವಿಧಾನಸೌಧದ ಅಂಗಳದಲ್ಲಿ ಓದುವ, ಚಿಂತಿಸುವ ಮತ್ತು ವಿಚಾರಗಳನ್ನು ಹಂಚಿಕೊಳ್ಳುವ ವಾತಾವರಣ ನಿರ್ಮಿಸುವುದು ಈ ಪುಸ್ತಕೋತ್ಸವದ ಆಶಯವಾಗಿದೆ. ವಿಶೇಷವಾಗಿ ಯುವಜನರನ್ನು ಮೊಬೈಲ್ ಪರದೆಯಿಂದ ಪುಸ್ತಕದ ಪುಟಗಳತ್ತ ಸೆಳೆಯುವ ಪ್ರಯತ್ನ ಇದಾಗಿದೆ.

ಜಿ.ಎಸ್.ಪಾಟೀಲ್, ಸಭಾಧ್ಯಕ್ಷರು, ವಿಧಾನಸಭೆ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor