ಹೈಕೋರ್ಟ್ನಲ್ಲಿ ಕಡತಗಳ ಪತ್ತೆಗೆ ಆರ್ಎಫ್ಐಡಿ ವ್ಯವಸ್ಥೆ; ಸುತ್ತೋಲೆ ಹೊರಡಿಸಿದ ರಿಜಿಸ್ಟ್ರಾರ್ ಜನರಲ್
ಬೆಂಗಳೂರು: ರಾಜ್ಯ ಹೈಕೋರ್ಟ್ನ ಎಲ್ಲ ಶಾಖೆಗಳಲ್ಲಿ ಪ್ರಕರಣಗಳ ಕಡತಗಳ ಚಲನವಲನ ಪತ್ತೆಹಚ್ಚಲು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್ಎಫ್ಐಡಿ) ಆಧಾರಿತ ಕಡತ ಪತ್ತೆ ವ್ಯವಸ್ಥೆಯ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಕಡತ ಸ್ವೀಕರಿಸಿದ ತಕ್ಷಣ ಹಾಗೂ ಮತ್ತೊಂದು ವಿಭಾಗಕ್ಕೆ ಕಳುಹಿಸುವ ಮುನ್ನ ಅದರ ಆರ್ಎಫ್ಐಡಿ ಟ್ಯಾಗ್ ಸ್ಕ್ಯಾನ್ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ಎಂ. ಚಂದ್ರಶೇಖರ ರೆಡ್ಡಿ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಕುರಿತ ಸೂಚನೆಗಳಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶಿಸಲಾಗಿದೆ. ಹೈಕೋರ್ಟ್ನಲ್ಲಿ ಪ್ರಕರಣಗಳ ಕಡತಗಳ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣ ಪ್ರಕ್ರಿಯೆ ಆರಂಭಿಸಲಾಗಿದೆ. ಅದರ ಭಾಗವಾಗಿ 2026ರ ಜೂನ್ನಿಂದ ಹೊಸದಾಗಿ ದಾಖಲಾಗುವ ಪ್ರಕರಣಗಳ ವಿವರಗಳನ್ನು ಆರ್ಎಫ್ಐಡಿ ಟ್ಯಾಗ್ಗಳಿಗೆ ಜೋಡಿಸಿ, ಅರ್ಜಿ ಸಲ್ಲಿಕೆ ಕೌಂಟರ್ಗಳಲ್ಲಿಯೇ ಕಡತಗಳಿಗೆ ಅಳವಡಿಸಲಾಗುತ್ತಿದೆ. ಜೂನ್ಗೂ ಮೊದಲು ದಾಖಲಾದ ಪ್ರಕರಣಗಳು ವಿಚಾರಣೆಗೆ ಬಂದಾಗ ಅವುಗಳ ಕಡತಗಳಿಗೂ ಟ್ಯಾಗ್ ಅಳವಡಿಸಲಾಗುತ್ತಿದೆ.
ವಿವಿಧ ಶಾಖೆಗಳ ನಡುವೆ ಕಡತಗಳ ಚಲನವಲನ ದಾಖಲಿಸಲು ಹೈಕೋರ್ಟ್ನ ಇಂಜಿನಿಯರ್ಗಳು ವೆಬ್ ಆಧಾರಿತ ತಂತ್ರಾಂಶ ಅಭಿವೃದ್ಧಿಪಡಿಸಿದ್ದಾರೆ. ಪ್ರಕರಣ ದಾಖಲಾದ ಹಂತದಿಂದ ಇತ್ಯರ್ಥವಾಗುವವರೆಗೆ ಕಡತ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಇದು ನೆರವಾಗಲಿದೆ. ಪ್ರತಿ ಶಾಖೆ ಹಾಗೂ ಸಿಬ್ಬಂದಿ ಕಡತ ನಿರ್ವಹಣೆಗೆ ತೆಗೆದುಕೊಳ್ಳುವ ಸಮಯವನ್ನೂ ತಿಳಿಯಬಹುದಾಗಿದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.