ಉತ್ತರ ಕರ್ನಾಟಕದವರು ಮನವಿ ಸಲ್ಲಿಸುವ ಬದಲು ಹಕ್ಕೊತ್ತಾಯವನ್ನು ಗಟ್ಟಿಯಾಗಿ ಮಂಡಿಸಬೇಕು : ಲಕ್ಷ್ಮಣ ಸವದಿ
ಬೆಂಗಳೂರು : ಉತ್ತರ ಕರ್ನಾಟಕದವರು ಮನವಿ ಸಲ್ಲಿಸುವ ಬದಲು ತಮ್ಮ ಹಕ್ಕೊತ್ತಾಯವನ್ನು ಗಟ್ಟಿಯಾಗಿ ಮಂಡಿಸಬೇಕು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.
ರವಿವಾರ ನಗರದಲ್ಲಿರುವ ಅರಮನೆ ಮೈದಾನದಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಉತ್ತರ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ವಿಭಜನೆಯಿಂದ ಈ ಭಾಗಕ್ಕೆ ಲಾಭವಾಗುವುದಿಲ್ಲ. ಅಖಂಡ ಕರ್ನಾಟಕದ ಒಳಗೆಯೇ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯವಾಗಬೇಕು ಎಂದರು.
ಕೃಷಿ ಭೂಮಿಯನ್ನು ಮಾರಾಟ ಮಾಡದೆ ಕಾಯ್ದುಕೊಳ್ಳುವುದು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ. ಉತ್ತರ ಕರ್ನಾಟಕದವರು ಮನವಿ ಸಲ್ಲಿಸುವ ಬದಲು ತಮ್ಮ ಹಕ್ಕೊತ್ತಾಯವನ್ನು ಗಟ್ಟಿಯಾಗಿ ಮಂಡಿಸಬೇಕು. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಸೇರಿ ಅಖಂಡ ಕರ್ನಾಟಕವನ್ನು ಪೂರ್ವಜರು ಕಟ್ಟಿದ್ದು, ಇಚ್ಛಾಶಕ್ತಿಯಿಂದ ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಸೇರಿದಂತೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಅವರು ಹೇಳಿದರು.
ಸಚಿವ ಎಂ.ಬಿ.ಪಾಟೀಲ್ ಅವರು ಕೈಗಾರಿಕಾ ಸಚಿವರಾಗಿದ್ದು, ಕೃಷಿಯ ಜೊತೆಗೆ ಉತ್ತರ ಕರ್ನಾಟಕಕ್ಕೂ ಕೈಗಾರಿಕೆಗಳನ್ನು ತರುವ ಚಿಂತನೆ ಹೊಂದಿದ್ದಾರೆ. ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಉದ್ಯೋಗ ನಷ್ಟದ ಆತಂಕ ಎದುರಾಗುತ್ತಿರುವ ಸಂದರ್ಭದಲ್ಲಿ, ಕೃಷಿ ಮತ್ತು ನಮ್ಮ ಭೂಮಿಯೇ ಮುಂದಿನ ಆಸರೆಯಾಗಲಿದೆ. ಹೊರಗಿನವರು ಕಡಿಮೆ ದರಕ್ಕೆ ಜಮೀನು ಖರೀದಿಸಲು ಮುಂದಾಗುತ್ತಿದ್ದು, ಯಾವುದೇ ಕಾರಣಕ್ಕೂ ರೈತರು ತಮ್ಮ ಜಮೀನು ಮಾರಾಟ ಮಾಡಬಾರದು ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಮೇಟಿ, ನಿವೃತ್ತ ಅಧಿಕಾರಿ ಸೋಮಶೇಖರ್, ಸಂಘಟನೆಯ ಶಂಕರ್ ಬಾಗೂಜಿ, ಬಸವರಾಜ ತಿಂದೂರ, ಪಾಲಾಕ್ಷಿ ಬಾಣದ, ಕಲ್ಲಪ್ಪ ಲವಣಿ, ಪ್ರೊ.ಎಂ.ವಿ.ನೇಗೂರ, ನೀಲಕಂಠ ನಾಯರ್ ಸೇರಿದಂತೆ ಹಲವರು ಭಾಗವಹಿಸಿದ್ದರು.