ಹಿರಿಯ ಲೇಖಕಿ ಸ.ಉಷಾ ನಿಧನ
ಬೆಂಗಳೂರು : ಹಿರಿಯ ಲೇಖಕಿ, ಕವಯಿತ್ರಿ, ಸ. ಉಷಾ(72) ಅವರು ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದಾಗಿ ಕಳೆದ ಹದಿನೈದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ.ಉಷಾ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ರವಿವಾರ ಮಧ್ಯಾಹ್ನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1954ರ ಎ.5ರಂದು ಮೈಸೂರಿನಲ್ಲಿ ಜನಿಸಿದ ಸ. ಉಷಾ ಅವರು, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಚಿನ್ನದ ಪದಕದೊಂದಿಗೆ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದರು. ಹಾಸನ ಜಿಲ್ಲೆಯ ಅರಸೀಕೆರೆಯ ಹೊಯ್ಸಳೇಶ್ವರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ಬಳಿಕ ಶಿವಮೊಗ್ಗದಲ್ಲಿ ನೆಲೆಸಿದ್ದರು.
ಬಂಡಾಯ ಮತ್ತು ಮಹಿಳಾ ಸಾಹಿತ್ಯ ಚಳವಳಿಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಉಷಾ ಅವರು, ತೊಗಲು ಗೊಂಬೆಯ ಆತ್ಮಕಥೆ, ಈ ನೆಲದ ಹಾಡು, ಹವಳ ಹಾರಿದ ಹೊತ್ತು, ಕಸೂತಿ ಕವನ ಸಂಕಲನಗಳು, ‘ವೈದೇಹಿ’ ವಿಮರ್ಶಾ ಕೃತಿ ಹಾಗೂ ಲೇಖಾಭಿರಾಮ ಲೇಖನಗಳ ಸಂಗ್ರಹ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿದ್ದವು.
ಸ.ಉಷಾ ಅವರ ನಿಧನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ.ಆರ್.ಸುನಂದಮ್ಮ ಸೇರಿ ಅನೇಕ ಹಿರಿಯ ಸಾಹಿತಿಗಳು, ವಿಮರ್ಶಕರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.