ಸಾಂದರ್ಭಿಕ ಚಿತ್ರ | PC : AI

ಬೆಂಗಳೂರು : ಮಾಜಿ ಪ್ರೇಯಸಿಯ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಅಶ್ಲೀಲ ಜಾಲತಾಣಕ್ಕೆ ಅಪ್‍ಲೋಡ್ ಮಾಡುವ ಮೂಲಕ ಆಕೆಯ ಖಾಸಗಿತನಕ್ಕೆ ಧಕ್ಕೆ ತಂದಿರುವ ಆರೋಪದಡಿ ಯುವಕನ ವಿರುದ್ಧ ಬೆಂಗಳೂರಿನ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಆರೋಪಿತ ಯುವಕ ಹಾಗೂ ಸಂತ್ರಸ್ತ ಯುವತಿ ಇಬ್ಬರೂ 26 ವರ್ಷದವರಾಗಿದ್ದು, 2023ರಿಂದ 2024ರವರೆಗೆ ಪ್ರೇಮ ಸಂಬಂಧದಲ್ಲಿದ್ದರು. ಈ ಅವಧಿಯಲ್ಲಿ ಇಬ್ಬರೂ ಒಟ್ಟಿಗೆ ವಾಸವಾಗಿದ್ದು ಸಹ ಜೀವನ(ಲಿವ್‍ಇನ್) ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರ ಖಾಸಗಿ ಕ್ಷಣಗಳನ್ನು ವಿಡಿಯೋ ರೂಪದಲ್ಲಿ ಚಿತ್ರೀಕರಿಸಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದಿನ ಕಳೆದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಜಗಳ ಪ್ರಾರಂಭವಾಗಿತ್ತು. ಅಂತಿಮವಾಗಿ ಪ್ರೇಮ ಸಂಬಂಧ ಮುರಿದುಬಿದ್ದಿತ್ತು. ಇಬ್ಬರೂ ದೂರವಾದ ಬಳಿಕ ಯುವತಿ, ತನ್ನ ಖಾಸಗಿ ವಿಡಿಯೋಗಳನ್ನು ಅಳಿಸಿಹಾಕುವಂತೆ ಮಾಜಿ ಪ್ರಿಯಕರನಿಗೆ ಮನವಿ ಮಾಡಿದ್ದಳು ಎನ್ನಲಾಗಿದೆ.

ಯುವತಿಯ ಮನವಿಗೆ ಒಪ್ಪಿಕೊಂಡಿದ್ದ ಆರೋಪಿ, ವಿಡಿಯೋಗಳನ್ನು ಅಳಿಸುವುದಾಗಿ ಭರವಸೆ ನೀಡಿದ್ದ. ಆದರೆ, ಆ ಭರವಸೆಯನ್ನು ಉಳಿಸಿಕೊಳ್ಳುವ ಬದಲು ವಿಡಿಯೋಗಳನ್ನು ಅಶ್ಲೀಲ ಜಾಲತಾಣಕ್ಕೆ ಅಪ್‍ಲೋಡ್ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕೆಲವು ದಿನಗಳ ಬಳಿಕ ಅಶ್ಲೀಲ ಜಾಲತಾಣದಲ್ಲಿ ಖಾಸಗಿ ವಿಡಿಯೋಗಳು ಅಪ್‍ಲೋಡ್ ಆಗಿರುವುದನ್ನು ಗಮನಿಸಿದ ಸ್ನೇಹಿತರು, ಯುವತಿಗೆ ಮಾಹಿತಿ ನೀಡಿದ್ದರು. ತನ್ನ ಅನುಮತಿಯಿಲ್ಲದೆ ವೈಯಕ್ತಿಕ ಕ್ಷಣಗಳ ವಿಡಿಯೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟಿರುವುದನ್ನು ಕಂಡು ಆತಂಕಗೊಂಡ ಯುವತಿಯು, ಅಪ್‍ಲೋಡ್ ಆದ ವಿಡಿಯೋಗಳನ್ನು ಅಳಿಸುವಂತೆ ಹಾಗೂ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೇಶ್ ಮಲ್ಲೂರು/ವಾರ್ತಾಭಾರತಿ

contributor

ಯೋಗೇಶ್ ಮಲ್ಲೂರು ಅವರು ವಾರ್ತಾಭಾರತಿ ದಿನಪತ್ರಿಕೆಯ ಬೆಂಗಳೂರು ಬ್ಯೂರೋದಲ್ಲಿ ವರದಿಗಾರ/ಉಪಸಂಪಾದಕ. ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಲ್ಲೂರಿನವರಾದ ಯೋಗೇಶ್, ತುಮಕೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಇವರು ಹಲವು ದಿನಪತ್ರಿಕೆಗಳು ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ಕ್ರೈಂ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಒಟ್ಟಾರೆ, ಪತ್ರಿಕೋದ್ಯಮ ವಲಯದಲ್ಲಿ ಬೆಂಗಳೂರು, ತುಮಕೂರಿನಲ್ಲಿ ಯೋಗೇಶ್ ಅವರಿಗೆ 7 ವರ್ಷಗಳ ಅನುಭವವಿದೆ.