ಬೆಂಗಳೂರು : ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಶಾಸಕರ ಭವನದಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್ ಹಾಗೂ ವಿಧಾನಸಭಾ ಸ್ಪೀಕರ್ ಜಿ.ಎಸ್.ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಭಾಪತಿ ಸಲೀಂ ಅಹ್ಮದ್, ಕನ್ನಡ ನಾಡು ಸರ್ವ ಜನಾಂಗದ ಶಾಂತಿಯ ತೋಟ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಕರ್ನಾಟಕದ ಸಂಸ್ಕೃತಿ ಇಡೀ ದೇಶಕ್ಕೆ ಮಾದರಿಯಾಗಿದೆ. ನಮ್ಮ ಕರ್ನಾಟಕ ನಾಡು ಗಂಧದ ಬೀಡು. ಇದು ಕೇವಲ ಕವಿವಾಣಿಯಲ್ಲ, ನಮ್ಮ ನಾಡಿನ ಬದುಕು, ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿದೆ ಎಂದು ಬಣ್ಣಿಸಿದರು.

ಕನ್ನಡಿಗರ ಜೊತೆಗೆ ವಿವಿಧ ಭಾಷೆಗಳನ್ನು ಮಾತನಾಡುವವರು, ವಿವಿಧ ಧರ್ಮ ಮತ್ತು ಸಂಸ್ಕೃತಿಗಳನ್ನು ಅನುಸರಿಸುವವರು ಇಲ್ಲಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸುವ, ಗೌರವದಿಂದ ಒಪ್ಪಿಕೊಳ್ಳುವ ಮತ್ತು ಎಲ್ಲರನ್ನೂ ನಮ್ಮವರೇ ಎಂದು ಭಾವಿಸುವ ವಿಶಾಲ ಮನೋಭಾವ ನಮ್ಮ ಕನ್ನಡ ನಾಡಿನ ವಿಶೇಷತೆಯಾಗಿದೆ ಎಂದು ಅವರು ನುಡಿದರು.

ವಿಧಾನಸಭಾ ಸ್ಪೀಕರ್ ಜಿ.ಎಸ್.ಪಾಟೀಲ್ ಮಾತನಾಡಿ, ಕನ್ನಡ ಸಾಹಿತ್ಯದ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ಇಂತಹ ಸಮೃದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಈ ವೇಳೆ ಪರಿಷತ್ತಿನ ಕಾರ್ಯದರ್ಶಿ ಜ್ಯೋತಿ, ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor