ಕೃಷ್ಣಾ ನದಿಯ 40 ಟಿಎಂಸಿ ಪ್ರವಾಹದ ನೀರನ್ನು ಭೀಮಾ ನದಿಗೆ ತಿರುಗಿಸುವ ಮಹಾರಾಷ್ಟ್ರದ ಯೋಜನೆಗೆ ಎಂ.ಬಿ.ಪಾಟೀಲ್ ಆಕ್ಷೇಪ
ಎಂ.ಬಿ.ಪಾಟೀಲ್
ಬೆಂಗಳೂರು : ಕೃಷ್ಣಾ ನದಿಯ 40 ಟಿಎಂಸಿ ಪ್ರವಾಹದ ನೀರನ್ನು ಭೀಮಾ ನದಿಗೆ ತಿರುಗಿಸುವ ಉದ್ದೇಶದಿಂದ ಮಹಾರಾಷ್ಟ್ರ ಸರಕಾರವು ಯೋಜನೆ ಕೈಗೆತ್ತಿಕೊಂಡಿದೆ ಎಂದು ಸ್ವತಃ ಆ ರಾಜ್ಯದ ಸಿಎಂ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು, ಈ ಪ್ರಸ್ತಾವಿತ ಯೋಜನೆಯು ಕರ್ನಾಟಕ ರಾಜ್ಯದ ಹಿತಕ್ಕೆ ಧಕ್ಕೆ ಉಂಟು ಮಾಡಲಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರವಿವಾರ ಪ್ರಕಟಣೆ ನೀಡಿರುವ ಅವರು, ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ ತೀರ್ಪಿನ ವ್ಯಾಪ್ತಿಗೆ ಒಳಪಡದ ಈ ಯೋಜನೆಯನ್ನು ಮಹಾರಾಷ್ಟ್ರ ಸರಕಾರ ಯಾವ ಆಧಾರದ ಮೇಲೆ ಕೈಗೆತ್ತಿಕೊಂಡಿದೆ ಮತ್ತು ಇದಕ್ಕೆ ವಿಶ್ವಬ್ಯಾಂಕ್‍ನಿಂದ ಹಣಕಾಸು ನೆರವು ಪಡೆಯಲು ಹೇಗೆ ಸಾಧ್ಯವಾಗಿದೆ ಎಂಬುದರ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಬೇಕು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅ.9ರಂದು ಮುಂಬೈನಲ್ಲಿ ನಡೆದ ‘ಇಂಡಿಯಾ ಟುಡೇ ಕಾನ್ ಕ್ಲೈವ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ಮಹಾಬಲೇಶ್ವರದ ಸಮೀಪ ಕೃಷ್ಣಾನದಿಯಿಂದ 40 ಟಿಎಂಸಿ ಅಡಿ ಪ್ರವಾಹದ ನೀರನ್ನು ಭೀಮಾನದಿಯ ಉಜ್ಜನಿ ಅಣೆಕಟ್ಟಿಗೆ ತಿರುಗಿಸುವ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಈ ನೀರನ್ನು ಮರಾಠವಾಡದ ಎರಡು ಜಿಲ್ಲೆಗಳು ಹಾಗೂ ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳ ಕೆಲವು ಭಾಗಗಳಿಗೆ ಪೂರೈಸುವ ಉದ್ದೇಶವಿದೆ. ಯೋಜನೆಯ ಕಾಮಗಾರಿ ಆರಂಭವಾಗಿದ್ದು, ವಿಶ್ವಬ್ಯಾಂಕ್ ಹಣಕಾಸು ನೆರವು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಶೀಘ್ರವೇ ಸಿಎಂ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಗುವುದು. ಇಂತಹ ವಿಷಯಗಳಲ್ಲಿ ಪಕ್ಷಾತೀತವಾಗಿ ಧ್ವನಿಯೆತ್ತಿ ರಾಜ್ಯದ ಹಿತರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಮಹಾರಾಷ್ಟ್ರ ಸರಕಾರವು ಈ ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು 2026ರ ಜುಲೈನಲ್ಲಿ 24 ಕೋಟಿ ರೂ.ಮಂಜೂರು ಮಾಡಿದೆ. ಈ ಸಂಬಂಧ, ಸುಮಾರು 84 ಕಿ.ಮೀ. ಉದ್ದದ ಮಾರ್ಗದಲ್ಲಿ ಭೂವೈಜ್ಞಾನಿಕ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸುತ್ತಿದೆ. 2026ರ ಅಂತ್ಯದ ವೇಳೆಗೆ ಡಿಪಿಆರ್ ಸಿದ್ಧವಾಗುವ ನಿರೀಕ್ಷೆಯಿದ್ದು, ಈ ಯೋಜನೆಗೆ 19ಸಾವಿರ ಕೋಟಿ ರೂ.ಗಳ ವೆಚ್ಚ ಮಾಡಲು ಉದ್ದೇಶಿಸಿದೆ ಎಂದು ಅವರು ವಿವರಿಸಿದ್ದಾರೆ.
ಮಹಾರಾಷ್ಟ್ರ ಸರಕಾರದ ಈ ಪ್ರಸ್ತಾವನೆಯು ಕೃಷ್ಣಾನದಿ ನೀರಿನ ಹಂಚಿಕೆ, ಆಲಮಟ್ಟಿ ಜಲಾಶಯದ ಒಳಹರಿವು ಹಾಗೂ ಕೆಳಹಂತದ ರಾಜ್ಯಗಳ ಹಕ್ಕುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ, ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮಹಾರಾಷ್ಟ್ರ ಸರಕಾರದ ಜೊತೆಗೆ ಕೇಂದ್ರ ಸರಕಾರವೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಯೋಜನೆಯ ಕಾನೂನುಬದ್ಧತೆ, ಅನುಮತಿಗಳು ಮತ್ತು ಹಣಕಾಸು ನೆರವಿನ ಕುರಿತು ಸಮಗ್ರ ಸ್ಪಷ್ಟನೆ ನೀಡಬೇಕು. ಕರ್ನಾಟಕದ ಹಿತಾಸಕ್ತಿಗಳಿಗೆ ಧಕ್ಕೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.