ಬೆಂಗಳೂರು : ದೇಶದಲ್ಲಿ ರೈಲ್ವೆ ಕ್ರಾಂತಿಯಾಗುತ್ತಿದ್ದು, ಪ್ರಧಾನಿ ಮೋದಿ ನೇತೃತ್ವದ ಸರಕಾರ ಭಯೋತ್ಪಾದಕರ ಬಾಂಬ್, ಬುಲೆಟ್‍ಗಳ ಸದ್ದಡಗಿಸಿ ಬುಲೆಟ್ ರೈಲುಗಳ ಯುಗಕ್ಕೆ ನಾಂದಿ ಹಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‍ನಲ್ಲಿ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಹೊಸ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈಲು ಪ್ರಯಾಣದ ಸುರಕ್ಷತೆಗಾಗಿ ‘ಕವಚ್' ಸ್ವಯಂ ಚಾಲಿತ ರೈಲು ರಕ್ಷಣಾ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ರೈಲು ಅಪಘಾತ ತಡೆಯುವ ನಿಟ್ಟಿನಲ್ಲಿ ಈ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.

ವಂದೇ ಭಾರತ್ ರೈಲುಗಳ ಸೇವೆ ವಿಸ್ತರಣೆಯಾಗಿದ್ದು, ಈಗಾಗಲೇ 150ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿವೆ. ರೈಲ್ವೆ ಸಾರಿಗೆಯಲ್ಲಿ ವೇಗ, ಸುರಕ್ಷತೆ ಮತ್ತು ಆಧುನಿಕ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಭಾರತದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾದ ಬೆಂಗಳೂರು ಮತ್ತು ಮುಂಬೈ ನಗರಗಳ ಸಂಪರ್ಕಕ್ಕೆ ‘ವಂದೇ ಭಾರತ್ ಸ್ಲೀಪರ್ ರೈಲು' ಮಹತ್ವದ ಸೇರ್ಪಡೆಯಾಗಲಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸುಮಾರು 1,118 ಕಿ.ಮೀ. ದೂರವನ್ನು ಕೇವಲ 16 ಗಂಟೆಗಳಲ್ಲಿ ಕ್ರಮಿಸಲಿದೆ. ಸುಮಾರು ಅರ್ಧದಷ್ಟು ಸಮಯ ಉಳಿಯುತ್ತದೆ ಎಂದು ಹೇಳಿದರು.

ಕರ್ನಾಟಕಕ್ಕೆ ಹೈಸ್ಪೀಡ್ ಕಾರಿಡಾರ್ :

ರಾಜ್ಯದಲ್ಲಿ ಹೈಸ್ಪೀಡ್ ರೈಲು ಕಾರಿಡಾರ್ ಗಳ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ತುಮಕೂರು, ಹಾವೇರಿ, ರಾಣೆಬೆನ್ನೂರು, ಬೆಳಗಾವಿ ಸೇರಿದಂತೆ ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವಗಳಿವೆ. ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಿದರು.

ರಾಜ್ಯಕ್ಕೆ 7,748 ಕೋಟಿ ರೂ.ಹಂಚಿಕೆ :

ಕೇಂದ್ರ ಸರಕಾರ 2026-27ರಲ್ಲಿ ರಾಜ್ಯಕ್ಕೆ 7,748 ಕೋಟಿ ರೂ. ಹಂಚಿಕೆ ಮಾಡಿದೆ. ರಾಜ್ಯದ ರೈಲ್ವೆ ಸಂಪರ್ಕ ಅಭಿವೃದ್ಧಿಗೆ ನಿರಂತರವಾಗಿ ಸಹಕಾರ ನೀಡುತ್ತಿದೆ. ಇದಕ್ಕಾಗಿ ಪ್ರಧಾನಿ ಮೋದಿಗೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಸಚಿವ ವಿ.ಸೋಮಣ್ಣಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

ಈ ವೇಳೆ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಪಿ.ಸಿ.ಮೋಹನ್, ಡಾ.ಸಿ.ಎನ್.ಮಂಜುನಾಥ್, ತೇಜಸ್ವಿಸೂರ್ಯ, ಲೆಹರ್ ಸಿಂಗ್, ಜಗ್ಗೇಶ್, ಮಾಜಿ ಸಂಸದ ಉಮೇಶ ಜಾಧವ್ ಸೇರಿದಂತೆ ಗಣ್ಯರು ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor