ಮೀನುಗಾರರ ಮೇಲೆ ಹಾಕಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆದುಕೊಳ್ಳಬೇಕು : ವಕೀಲ ಬಿ.ಟಿ.ವೆಂಕಟೇಶ್ ಆಗ್ರಹ
ಬೆಂಗಳೂರ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಮಲ್ಲುಕುರುವ ಗ್ರಾಮದಲ್ಲಿ ಪೊಲೀಸರ ನೇತೃತ್ವದಲ್ಲಿ ಮೀನುಗಾರರ ಕುಟುಂಬಗಳ ಎತ್ತಂಗಡಿ ಪ್ರಯತ್ನ ಹಾಗೂ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ವಿರುದ್ಧ ಧ್ವನಿ ಎತ್ತಿದ್ದ ಮೀನುಗಾರರ ಮೇಲೆ ಹಾಕಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆದುಕೊಳ್ಳಬೇಕು ಎಂದು ವಕೀಲ ಬಿ.ಟಿ.ವೆಂಕಟೇಶ್ ಆಗ್ರಹಿಸಿದ್ದಾರೆ.
ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕಗಳ ಹಿಂದೆ ಮಲ್ಲುಕುರುವ ಗ್ರಾಮವು ಅರಬ್ಬಿಸಮುದ್ರ ಪಾಲಾಯಿತು ಮತ್ತು ಬದುಕುಳಿದ ಕುಟುಂಬಗಳು ಅಂತಂತ್ರವಾದವು. ಅತಂತ್ರವಾದ ಕುಟುಂಬಗಳಿಗೆ ಸರಕಾರ ಸರ್ವೇ ನಂ.303ರಲ್ಲಿ ನಿವೇಶನಗಳನ್ನು ಹಂಚಿ, ಹಕ್ಕುಪತ್ರಗಳನ್ನು ನೀಡಿದೆ. ಮೀನುಗಾರರು ಟೋಂಕಾ ಮಜಿರೆ ಗ್ರಾಮದಲ್ಲಿ ಮನೆಗಳನ್ನು ಕಟ್ಟಿಕೊಂಡು ದಶಕಗಳಿಂದ ವಾಸ ಮಾಡುತ್ತಿದ್ದಾರೆ. ಟೋಂಕ 1 ಹಾಗೂ ಟೋಂಕ 2 ಗ್ರಾಮಗಳಿಗೆ ಪಂಚಾಯಿತಿಯೂ ಇದೆ ಎಂದು ತಿಳಿಸಿದರು.
ವರ್ಷಗಳಿಂದ ವಾಸ ಮಾಡುತ್ತಿದ್ದ ಮಲ್ಲುಕುರುವ ಗ್ರಾಮದ ಸರ್ವೇ ನಂಬರ್ 303 ದಾಖಲೆಯಿಂದ ಮಾಯವಾಗಿದೆ ಎಂದು ಸರಕಾರ ಹೇಳುತ್ತಿದೆ. ಮೀನುಗಾರರು ನಾಲ್ಕೈದು ವರ್ಷಗಳಿಂದ ಸರಕಾರ ಕೊಟ್ಟಿದ್ದ ನಿವೇಶನ ಹಕ್ಕು ಪತ್ರ, ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಮನೆಗಳಿಗೆ ಮರು ಸರ್ವೇ ಮಾಡಿಸಿಕೊಡಿ ಎಂದು ಮನವಿಗಳನ್ನು ನೀಡಿದ್ದರೂ, ಯಾವುದೇ ಕ್ರಮವಹಿಸಿಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರ ಮೈನಿಂಗ್ ಬಂದರೊಂದಕ್ಕೆ ಊರುಗಳ ಮೇಲ್ಗಡೆಯ ಜಮೀನನ್ನು ಹೈದರಾಬಾದಿನ ಕಂಪೆನಿಗೆ ಕೊಟ್ಟಿದ್ದರು ಎಂದು ಬಿ.ಟಿ.ವೆಂಕಟೇಶ್ ಮಾಹಿತಿ ನೀಡಿದರು.
ಮೀನುಗಾರ ವ್ಯಾಪಾರಸ್ಥರ ಅಧ್ಯಕ್ಷ ಗಣಪತಿ ತಾಂಡೇಲ್ ಮಾತನಾಡಿ, ಸರಕಾರ ಮಲ್ಲುಕುರುವ ಮೀನುಗಾರರಿಗೆ ನಾಲ್ಕು ವರ್ಷಗಳಿಂದ ಕಿರುಕುಳ ನೀಡುತ್ತಾ ಎತ್ತಂಗಡಿ ಮಾಡಲಾಗುವುದೆಂದು ಬೆದರಿಸುತ್ತಾ, ವಿರೋಧ ಮಾಡುತ್ತಿದ್ದ ಮೀನುಗಾರರ ಮೇಲೆ ಪ್ರಕರಣಗಳನ್ನು ಜಡಿಯುತ್ತಿದೆ. ಇದೀಗ ಪೊಲೀಸರು ಸರ್ವೇ ನೆಪದಲ್ಲಿ ಮನೆಗಳಿಗೆ ನುಗ್ಗಿ, ಸರ್ವೇ ಮಾಡಿಸುತ್ತಿದ್ದಾರೆ. ಈ ಕಾರ್ಯಕ್ಕೆ ಯಾರು ಅಡ್ಡಿ ಬರ ಬಾರದೆನ್ನುವ ಕಾರಣಕ್ಕೆ ಸೆಕ್ಷನ್ 144 ವಿಧಿಸಿ, 30ಕ್ಕೂ ಹೆಚ್ಚು ಮೀನುಗಾರರನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಎಸ್ಪಿ ನಾರಾಯಣ್ ಟೊಂಕ 1 ಹಾಗೂ 2ರಲ್ಲಿ ಮೀನುಗಾರರು ಅನಧಿಕೃತವಾಗಿ ನಿವೇಶನಗಳನ್ನು ನಿರ್ಮಿಸಿಕೊಂಡಿದ್ದಾರೆಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಇಲ್ಲಿನ ಮೀನುಗಾರರಿಗೆ ನ್ಯಾಯ ಕೊಡಿಸುತ್ತೇವೆಂದು ಹೇಳಿದ್ದರು. ಇದೀಗ ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆ. ಹಲವು ವರ್ಷಗಳಿಂದಲೂ ನಾವು ಇಲ್ಲಿಯೇ ವಾಸ ಮಾಡುತ್ತಿದ್ದೇವೆ. ಮೀನುಗಾರಿಕೆ ಬಿಟ್ಟರೇ, ನಮಗೆ ಬದುಕಿಲ್ಲ. ಇದೀಗ ಸರಕಾರ ನಮ್ಮ ಬದುಕನ್ನು ನಾಶಮಾಡುತ್ತಿದೆ. ಬಡವರಪರ ಎಂದು ಹೇಳುವ ಸರಕಾರಕ್ಕೆ ಮೀನುಗಾರರ ಬದುಕು ನಾಶವಾಗುತ್ತಿರುವುದು ಕಾಣುತ್ತಿಲ್ಲವೇ ಎಂದು ಗಣಪತಿ ಭಾವುಕರಾದರು.
ಮಾನವ ಹಕ್ಕುಗಳ ಹೋರಾಟಗಾರ್ತಿ ಅಖಿಲಾ ವಿದ್ಯಾಸಂದ್ರ ಮಾತನಾಡಿ, ಸರಕಾರ ಕೂಡಲೇ ಮೀನುಗಾರರ ಮೇಲೆ ಹಾಕಿರುವ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳಬೇಕು ಮತ್ತು ಮನೆಗಳ ಮೇಲಿನ ಸರ್ವೇ ನಿಲ್ಲಿಸಬೇಕು. ಉತ್ತರ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಎಸ್ಪಿ ನಾರಾಯಣ್ ರನ್ನು ಅಮಾನತು ಮಾಡಬೇಕು. ಮೀನುಗಾರರ ನಿವೇಶನಗಳಿಗೆ ಮತ್ತು ಕಳೆದು ಹೋಗಿರುವ ಸರ್ವೇ ನಂಬರ್ 303 ಅನ್ನು ಹುಡುಕಿಕೊಡಬೇಕು. ಜಿಲ್ಲಾಧಿಕಾರಿ, ಪೊಲೀಸರಿಂದ ಮೀನುಗಾರರಿಗೆ ರಕ್ಷಣೆ ಒದಗಿಸಬೇಕು. ಮೀನುಗಾರರ ಕುಟುಂಬಗಳ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ಮೇಲೆ ಹಾಗೂ ಜಿಲ್ಲಾಡಳಿತ ಅಧಿಕಾರಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.