‘ಜಿಬಿಎ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಣಿಕೆ’; 3157 ಕೋಟಿ ರೂ.ಗಳ 21 ಪ್ಯಾಕೇಜ್‍ಗಳಿಗೆ ಸಂಪುಟ ಅನುಮೋದನೆ?

Update: 2026-08-13 23:40 IST

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ, ಒಣ, ನೈರ್ಮಲ್ಯ ಮತ್ತು ರಸ್ತೆ ಗುಡಿಸುವಿಕೆ ತ್ಯಾಜ್ಯದ ಸಂಗ್ರಹಣೆ ಹಾಗೂ ಸಾಗಾಣಿಕೆ ಸೇವೆಗಾಗಿ 21 ಪ್ಯಾಕೇಜ್‍ಗಳ 3,157.37 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎನ್ನಲಾಗಿದೆ.

ಜಿಬಿಎ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ವಾರ್ಡ್ ರಸ್ತೆಗಳು ಸೇರಿದಂತೆ ರಸ್ತೆ ಮೂಲ ಸೌಲಭ್ಯ ಅಭಿವೃದ್ಧಿ ಕಾಮಗಾರಿಗಳನ್ನು 2 ಸಾವಿರ ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ 100 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯ ನಿರ್ಮಾಣ ಕಾಮಗಾರಿಯನ್ನು 41 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅಡ್ಯಾರು ಗ್ರಾಮದಲ್ಲಿ 7.67 ಎಕರೆ ಜಮೀನನ್ನು ಹೊರಾಂಗಣ ಕ್ರೀಡಾಂಗಣ/ಆಟದ ಮೈದಾನ ಉದ್ದೇಶಕ್ಕಾಗಿ ಭಂಡಾರಿ ಪ್ರತಿಷ್ಠಾನಕ್ಕೆ ಮಂಜೂರು ಮಾಡಲು ಹಾಗೂ ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ಅಣ್ಣಿಗೇರಿ ತಾಲೂಕಿನಲ್ಲಿ ಪ್ರಜಾಸೌಧ ತಾಲೂಕು ಆಡಳಿತ ಕೇಂದ್ರ ಕಟ್ಟಡವನ್ನು 10.70 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎನ್ನಲಾಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಹಂಚಿಕೆಯಾದ 400 ಬಸ್ಸುಗಳನ್ನು ಒಟ್ಟು 152.00 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಹಾಗೂ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನ ಸಮಯದಲ್ಲಿ ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗುವ ಸಿಬ್ಬಂದಿಗಳಿಗೆ ವಸತಿ ಸೌಲಭ್ಯವನ್ನು ಒದಗಿಸುವುದಕ್ಕಾಗಿ 20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ 1,000 ಸಿಬ್ಬಂದಿಗಳಿಗೆ ಶಾಶ್ವತ ಬ್ಯಾರೆಕ್‍ಗಳನ್ನು ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ಎಂದು ತಿಳಿದು ಬಂದಿದೆ.

ಬೆಂಗಳೂರು ಶ್ರೀಗಂಧದ ಕಾವಲಿನಲ್ಲಿ ಕೇಂದ್ರ ನಿರಾಶ್ರಿತರ ಪರಿಹಾರ ಕೇಂದ್ರದ 5 ಎಕರೆ ಜಮೀನನ್ನು ಬೆಂಗಳೂರು ಪಶ್ಚಿಮ ನಗರಪಾಲಿಕೆಗೆ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ರಾಜ್ಯದಾದ್ಯಂತ ನಗರ ಪ್ರದೇಶಗಳಲ್ಲಿನ ಸ್ಥಳೀಯ ಯೋಜನಾ ಪ್ರದೇಶಗಳ ಒಳಗೆ ಅಥವಾ ಹೊರಗೆ ಇರುವ, ಬಿ-ಖಾತೆ ಹೊಂದಿರುವ ನಿವೇಶನಗಳು/ಸೈಟ್‍ಗಳಿಗೆ ಎ-ಖಾತಾ ನೀಡುವಿಕೆಯನ್ನು ಹಾಗೂ ಯಾವುದೇ ಖಾತೆ ಹೊಂದಿರದ ನಿವೇಶನಗಳು/ ಸೈಟ್‍ಗಳಿಗೆ ಹೊಸ ಎ-ಖಾತೆ ನೀಡುವಿಕೆಯನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಧೇಯಕಗಳು, ನಿಯಮಗಳಿಗೆ ಅನುಮೋದನೆ: 2026ನೆ ಸಾಲಿನ ಕರ್ನಾಟಕ ನಾಗರಿಕ ಸೇವೆಗಳು(ಲಿಪಿಕ ಹುದ್ದೆಗಳ ನೇಮಕಾತಿ)(ರದ್ದತಿ)ನಿಯಮಗಳು ಮತ್ತು ಕರ್ನಾಟಕ ನಾಗರಿಕ ಸೇವೆಗಳು(ನೇರ ನೇಮಕಾತಿ) (ಸಾಮಾನ್ಯ) (ತಿದ್ದುಪಡಿ) ನಿಯಮಗಳು, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ(ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳ ನೇಮಕಾತಿ(ವಿಶೇಷ)ನಿಯಮಗಳಿಗೆ ಅನುಮೋದನೆ.

2026ನೆ ಸಾಲಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, ಕರ್ನಾಟಕ ಅಪಾರ್ಟ್‍ಮೆಂಟ್ (ಓನರ್‍ಶಿಪ್ ಅಂಡ್ ಮ್ಯಾನೇಜ್‍ಮೆಂಟ್) ವಿಧೇಯಕ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News