ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಐಷಾರಾಮಿ ಕಾನ್ರಾಡ್ ಹೋಟೆಲ್ ನಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಶುಕ್ರವಾರ ಸಂಜೆ ಮೃತಪಟ್ಟಿರುವುದು ವರದಿಯಾಗಿದೆ. ಹೋಟೆಲ್ ನ ಈಜುಕೊಳದಲ್ಲಿ ವಿದ್ಯುತ್ ಆಘಾತದಿಂದ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಮೃತರನ್ನು ಜರ್ಮನಿಯ ಅಲೆಕ್ಸಾಂಡರ್ ಮ್ಯಾಕ್ಸಮಿಲನ್(57) ಹಾಗೂ ಸ್ಲೋವಾಕಿಯಾದ ಜುರಾಜ್ ಓರ್ವಟ್ ಎಂದು ಗುರುತಿಸಲಾಗಿದೆ. ಇದೇವೇಳೆ ಇನ್ನಿಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಮೃತರ ಪೈಕಿ ಜರ್ಮನಿಯ ಅಲೆಕ್ಸಾಂಡರ್ ಲುಪ್ತಾನ್ಸಾ ನೌಕರನಾಗಿದ್ದರೆ. ಓವರ್ಟ್ ಐಬಿಎಂ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಎಂಬುದು ಗೊತ್ತಾಗಿದೆ.
ಘಟನೆ ಏನು...?
ಶುಕ್ರವಾರ ಸಂಜೆ ಕ್ರಾನಾಡ್ ಹೋಟೆಲ್ ಸ್ವಿಮ್ಮಿಂಗ್ ಪೂಲ್ ನಿಂದ ಒಟ್ಟು ನಾಲ್ವರನ್ನು ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲೆಕ್ಸಾಂಡ್ , ಓವರ್ಟ್, ಹಾಗೂ ಅಮೆರಿಕದ ಪ್ರಜೆ ಮ್ಯಾಥ್ಯೂ ಡೆಸಾಂಟಿಸ್, ಮತ್ತು ಸ್ವಿಮ್ಮಿಂಗ್ ಪೂಲ್ ನಿರ್ವಹಣೆ ಮಾಡುವ ರಾಹುಲ್ ತಿವಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಅಲೆಕ್ಸಾಂಡರ್ ಮೃತಪಟ್ಟಿದ್ದರೆ, ಓವರ್ಟ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಉಳಿದಂತೆ ಮ್ಯಾಥ್ಯೂ ಡೆಸಾಂಟೀಸ್ ಹಾಗೂ ರಾಹುಲ್ ತಿವಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯುತ್ ಆಘಾತ?
ಆಸ್ಪತ್ರೆ ವೈದ್ಯರ ಮೂಲಗಳ ಪ್ರಕಾರ ವಿದೇಶಿ ಪ್ರಜೆಗಳಿಬ್ಬರ ಸಾವಿಗೆ ವಿದ್ಯುತ್ ಶಾಕ್ ಕಾರಣ ಎಂಬುದು ಹೇಳಲಾಗಿದೆ. ಅಲ್ಲದೆ ಗಾಯಾಳುಗಳು ಕೂಡ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ ಎಂಬುದು ಆಸ್ಪತ್ರೆಯ ವೈದ್ಯಕೀಯ ಮೂಲಗಳ ಪ್ರಾಥಮಿಕ ಮಾಹಿತಿ.
ಸ್ವಿಮ್ಮಿಂಗ್ ಪೂಲ್ ಬಳಿ ವಿದ್ಯುತ್ ಪ್ರವಹಿಸಿರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಘಟನೆಯ ಬಗ್ಗೆ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.