ಮಾದಕ ದ್ರವ್ಯ ಮಾರಾಟಗಾರರಿಗೆ ನೀಡಿರುವ ಬಾಡಿಗೆ ಮನೆಗಳನ್ನೂ ಬುಲ್ಡೋಝರ್ ಕಾರ್ಯಾಚರಣೆಯಲ್ಲಿ ಕೆಡವಲು ಸರಕಾರ ಸಿದ್ಧ: ಗೃಹ ಸಚಿವ ಡಾ. ಜಿ. ಪರಮೇಶ್ವರ್
ಬೆಂಗಳೂರು, ಡಿ.11: ರಾಜ್ಯದಲ್ಲಿ ಮಾದಕ ದ್ರವ್ಯಗಳ ಪಿಡುಗಿನ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತಿರುವ ಸರಕಾರ, ಮಾದಕ ದ್ರವ್ಯ ಮಾರಾಟಗಾರರಿಗೆ ಬಾಡಿಗೆಗೆ ನೀಡಿರುವ ಮನೆಗಳನ್ನು ಬುಲ್ಡೋಝರ್ ಕಾರ್ಯಾಚರಣೆಯಲ್ಲಿ ಕೆಡವುವಂತಹ ಕಠಿಣ ಕ್ರಮಗಳನ್ನೂ ಕೈಗೊಳ್ಳಲು ಸಿದ್ಧವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಮಾತನಾಡಿದ ಅವರು, ಮಾದಕ ದ್ರವ್ಯ ಸಂಬಂಧಿತ ಅಪರಾಧಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ತಿಳಿಸಿದರು. ಎಂಎಲ್‌ಸಿ ಕೆ. ಅಬ್ದುಲ್ ಜಬ್ಬಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಹಾಗೂ ಮಾರಾಟ ಪ್ರಕರಣಗಳಲ್ಲಿ ಗಣನೀಯ ಸಂಖ್ಯೆಯ ವಿದೇಶಿ ಪ್ರಜೆಗಳು, ವಿಶೇಷವಾಗಿ ಆಫ್ರಿಕಾ ದೇಶಗಳಿಂದ ಬಂದವರು, ಸಿಕ್ಕಿಬಿದ್ದಿರುವುದಾಗಿ ಹೇಳಿದರು.
“ಮಾದಕ ದ್ರವ್ಯ ಮಾರಾಟದಲ್ಲಿ ತೊಡಗಿರುವವರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. ಅವರಿಗೆ ಮನೆಗಳನ್ನು ಬಾಡಿಗೆಗೆ ನೀಡಿರುವ ಮನೆಮಾಲಕರನ್ನೂ ಗುರುತಿಸಲಾಗಿದೆ. ಇತ್ತೀಚೆಗೆ, ಇಂತಹ ಮನೆಗಳನ್ನು ಬುಲ್ಡೋಝರ್ ಕಾರ್ಯಾಚರಣೆಯಲ್ಲಿ ಕೆಡಹುವ ಹಂತಕ್ಕೂ ಸರಕಾರ ಹೋಗಿದೆ,” ಎಂದು ಅವರು ಹೇಳಿದರು.
ದಾವಣಗೆರೆಯಲ್ಲಿ ಅಪ್ರಾಪ್ತರಿಗೆ ಮಾದಕ ದ್ರವ್ಯ ಸರಬರಾಜು ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಜಬ್ಬಾರ್, ಅಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇಲಾಖೆಯೊಳಗಿನ ಮಾಹಿತಿ ಸೋರಿಕೆ ಆರೋಪಗಳನ್ನೂ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದರು.
ಮಾದಕ ದ್ರವ್ಯ ತಯಾರಿಕೆ, ಕಳ್ಳಸಾಗಣೆ ಹಾಗೂ ಮಾರಾಟವು ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಜಾಲವಾಗಿ ವಿಸ್ತರಿಸಿರುವುದರಿಂದ ಸಮಸ್ಯೆ ಜಾಗತಿಕವಾಗಿದೆ ಎಂದು ಗೃಹ ಸಚಿವರು ಹೇಳಿದರು. ಹೆಚ್ಚಿನ ಲಾಭದಾಸೆಯೇ ಈ ಅಕ್ರಮ ಚಟುವಟಿಕೆಗಳ ಹಿಂದಿರುವ ಪ್ರಮುಖ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ವಿದೇಶಿ ಪ್ರಜೆಗಳ ಕುರಿತು ಮಾತನಾಡಿದ ಪರಮೇಶ್ವರ್, ನ್ಯಾಯಾಲಯದ ಪ್ರಕರಣಗಳು ಬಾಕಿ ಇರುವುದರಿಂದ ಕೆಲ ಅಪರಾಧಿಗಳು ಭಾರತದಲ್ಲೇ ಉಳಿಯಲು ಪ್ರಯತ್ನಿಸುತ್ತಾರೆ ಎಂದರು. “ರಾಯಭಾರ ಕಚೇರಿ ಮತ್ತು ದೂತಾವಾಸ ಪ್ರಕ್ರಿಯೆಗಳು ಸಮಯ ತೆಗೆದುಕೊಳ್ಳುತ್ತವೆ. ಆದರೂ ಇದುವರೆಗೆ ಸುಮಾರು 300 ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡಲಾಗಿದೆ,” ಎಂದು ಅವರು ಹೇಳಿದರು.
2024ರಲ್ಲಿ ರಾಜ್ಯದಲ್ಲಿ 4,168 ಮಾದಕ ದ್ರವ್ಯ ಸಂಬಂಧಿತ ಪ್ರಕರಣಗಳು ದಾಖಲಾಗಿದ್ದು, 4,091 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. 2025ರಲ್ಲಿ ಈ ಸಂಖ್ಯೆ 5,747ಕ್ಕೆ ಏರಿಕೆಯಾಗಿದ್ದು, 4,510 ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಂಡಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ಸೌಜನ್ಯ: thenewsminute.com