ಗುರುದಕ್ಷಿಣೆ ಹೆಸರಿನಲ್ಲಿ 2,500ಕ್ಕೂ ಹೆಚ್ಚು ಅಂಗಸಂಸ್ಥೆಗಳ ಮೂಲಕ ನಿಧಿ ಸಂಗ್ರಹ: ಆರೆಸ್ಸೆಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಸಚಿವ ಪ್ರಿಯಾಂಕ್ ಖರ್ಗೆ (Photo: PTI)
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಜಾಗತಿಕ ಜಾಲದ ಮೂಲಕ ಅಕ್ರಮ ಹಣ ವರ್ಗಾವಣೆ ನಡೆಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಅವರು, “ಭಾರತೀಯ ಮಾಧ್ಯಮಗಳು ಇದುವರೆಗೆ ಸಮರ್ಪಕವಾಗಿ ಸ್ಪರ್ಶಿಸದ ನಿರ್ಣಾಯಕ ವಿಚಾರವೊಂದನ್ನು ಗಮನಕ್ಕೆ ತರುತ್ತಿದ್ದೇನೆ. ವ್ಯಕ್ತಿಗಳ ಸಂಘಟನೆ ಎಂದು ಕರೆಸಿಕೊಳ್ಳುವ ಸಂಸ್ಥೆಯು ಜಗತ್ತಿನಾದ್ಯಂತ 2,500ಕ್ಕೂ ಹೆಚ್ಚು ಅಂಗಸಂಸ್ಥೆಗಳ ಜಾಲವನ್ನು ನಿರ್ಮಿಸಿಕೊಂಡಿದೆ ಎಂದು ಹೇಳಿದ್ದಾರೆ.
ಈ ಜಾಲದ ಮೂಲಕ ‘ಗುರು ದಕ್ಷಿಣೆ’ ಹೆಸರಿನಲ್ಲಿ ಹಣ ಸಂಗ್ರಹಿಸಿ, RSS ತನ್ನ ವಿಭಜಕ ಕಾರ್ಯಸೂಚಿಗೆ ಆರ್ಥಿಕ ಬೆಂಬಲ ಒದಗಿಸುತ್ತಿದೆ. ವಿಶ್ವದ ಅತಿದೊಡ್ಡ NGO ಎಂದು ಪರಿಗಣಿಸಲ್ಪಡುವ ಈ ಜಾಲವು ಅಕ್ರಮ ಹಣ ವರ್ಗಾವಣೆ ನಡೆಸುತ್ತಿದ್ದು, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಈ ಸಂಬಂಧ caravanmagazine.in ನಿಯತಕಾಲಿಕೆಯಲ್ಲಿ ಪ್ರಕಟವಾದ ತನಿಖಾ ಲೇಖನವನ್ನು ಉಲ್ಲೇಖಿಸಿರುವ ಪ್ರಿಯಾಂಕ್ ಖರ್ಗೆ, RSSನ ‘ವಿಚಾರ ಪರಿವಾರ’ದ ಸಾಂಸ್ಥಿಕ ವಿನ್ಯಾಸವನ್ನು ವಿವರಿಸುವ ಸಮಗ್ರ ನಕ್ಷೆಯನ್ನು ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.