×
Ad

ಅಂತರ್‌ರಾಷ್ಟ್ರೀಯ ವಾಣಿಜ್ಯ ಮೇಳ ‘ಉತ್ಪಾದನೋತರ ಕೃಷಿ-2026’ ವ್ಯವಸ್ಥಿತ ಆಯೋಜನೆಗೆ ಚಲುವರಾಯಸ್ವಾಮಿ ಸೂಚನೆ

Update: 2026-01-14 23:20 IST

ಬೆಂಗಳೂರು : ಬೆಂಗಳೂರು ಅರಮನೆ ಮೈದಾನದಲ್ಲಿ ಫೆ.6 ರಿಂದ 8ರವರೆಗೆ ನಡೆಯುವ ಅಂತರ್‌ ರಾಷ್ಟ್ರೀಯ ವಾಣಿಜ್ಯ ಮೇಳ ‘ಉತ್ಪಾದನೋತರ ಕೃಷಿ-2026’ ಮೇಳದಲ್ಲಿ ಯಾವುದೆ ವ್ಯತ್ಯಾಸಗಳಾಗದಂತೆ ಅಚ್ಚುಕಟ್ಟಾಗಿ ಆಯೋಜಿಸುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಅಂತರ್‍ರಾಷ್ಟ್ರೀಯ ಸಿರಿಧಾನ್ಯ ಮೇಳದ ಪೂರ್ವ ಭಾವಿ ಸಿದ್ದತೆ ಸಭೆ ನಡೆಸಿದ ಸಚಿವರು ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಮೇಳದ ಉದ್ಘಾಟನೆ, ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ, ಕೇಂದ್ರ ಸರಕಾರದ ಹಲವು ಸಚಿವರು ಹಾಗೂ ರಾಜ್ಯದ ಸಚಿವರು ಪಾಲ್ಗೊಳ್ಳಲಿದ್ದು, ಶಿಷ್ಟಾಚಾರದಲ್ಲಿ ಯಾವುದೇ ಲೋಪ ಉಂಟಾಗದಂತೆ ಗಮನಹರಿಸಲು ಚಲುವರಾಯಸ್ವಾಮಿ ಸೂಚಿಸಿದರು.

ಈ ಭಾರಿಯ ಮೇಳ ವಿಶೇಷವಾಗಿರುವಂತೆ ಸೂಚನೆ ನೀಡಿದ ಸಚಿವರು, 121 ಮಂದಿ ರೈತರಿಗೆ ಕೃಷಿ ಪಂಡಿತ ಪ್ರಶಸ್ತಿ ಕೊಡುವುದರ ಜೊತೆಗೆ ಮೇಳಕ್ಕೆ ಮುಂಚಿತವಾಗಿ ಅಗ್ರಿ ರನ್, ಮರೆತುಹೋದ ಖಾದ್ಯಗಳ ಪರಿಚಯ ಹಾಗೂ ಬೆಂಗಳೂರಿನ ಆಯ್ದ ಕಾಲೇಜುಗಳಲ್ಲಿ ಸಿರಿಧಾನ್ಯದಿಂದ ತಯಾರಿಸುವ ಖಾದ್ಯಗಳ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಸಿರಿಧಾನ್ಯ ಬಳಕೆ ಹಾಗೂ ಉತ್ಪಾದನೆ ಉತ್ತೆಜಿಸುವ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೇಶ ವಿದೇಶದ ವಿಜ್ಞಾನಿಗಳು, ತಜ್ಞರು, ಗಣ್ಯರು ಇದರಲ್ಲಿ ಪಾಲ್ಗೊಳ್ಳುವುದರಿಂದ ಎಲ್ಲ ಕಾರ್ಯಕ್ರಮಗಳು ಗುಣಾತ್ಮಕವಾಗಿ ಹಾಗೂ ರಚನಾತ್ಮಕವಾಗಿರಲಿ, ರೈತ ಸ್ನೇಹಿ, ಗ್ರಾಹಕ ಸ್ನೇಹಿ ವಾತಾವರಣ ಸೃಷ್ಟಿ ಮಾಡಿ ಎಲ್ಲ ರೀತಿಯ ಮೂಲಭೂತ ಸೌಕರ್ಯ ಒದಗಿಸಿ ಎಂದು ಚಲುವರಾಯಸ್ವಾಮಿ ನಿರ್ದೇಶನ ನೀಡಿದರು.

ಸಿರಿಧಾನ್ಯಗಳ ಕೃಷಿ, ಅದರ ಉತ್ಪನ್ನಗಳ ಮೌಲ್ಯ ವರ್ಧನೆ, ವಿಭಿನ್ನ ಖಾದ್ಯ ತಯಾರಿಕೆ ಬಗ್ಗೆ ರೈತರಿಗೆ, ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ದೊರೆಯುವಂತೆ ಮಾಡಿ ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಎಂದು ಅವರು ಸೂಚಿಸಿದರು.

ಮೇಳದ ಯಶಸ್ವಿ ಸಂಘಟನೆಗೆ ರಚಿಸಿಲಾಗಿರುವ ಉಪ ಸಮಿತಿಗಳು ಹೆಚ್ಚಿನ ಜವಾಬ್ದಾರಿ ವಹಿಸಿ, ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಬೇರೆ ಜಿಲ್ಲೆಗಳಲ್ಲಿಯೂ ಪ್ರಚಾರ ಕೈಗೊಳ್ಳಬೇಕು, ಗ್ರಾಮಿಣ ರೈತರಿಗೆ ಇದರಲ್ಲಿ ಭಾಗವಹಿಸಲು ಸೂಕ್ತ ವ್ಯವಸ್ಥೆ ಮಾಡಿ, ಸೌಲಭ್ಯ ಕಲ್ಪಿಸಬೇಕು ಎಂದು ಚಲುವರಾಯಸ್ವಾಮಿ ಹೇಳಿದರು. ಕೃಷಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಸಹ ಅಧಿಕಾರಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಕೃಷಿ ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಯು.ಪಿ.ಸಿಂಗ್, ಕೃಷಿ ಇಲಾಖೆ ನಿರ್ದೇಶಕ ಡಾ. ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಂಥನಾಳ್, ಸೆಕಂಡರಿ ಅಗ್ರಿಕಲ್ಚರಲ್ ನಿರ್ದೇಶಕ ವೆಂಕಟರಮಣ ರೆಡ್ಡಿ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News