×
Ad

ವಿಧಾನಮಂಡಲದ ಸಂಪ್ರದಾಯ ಭಗ್ನಗೊಳಿಸಲು ಹೊರಟಿರುವ ಸರಕಾರ : ಸುನಿಲ್ ಕುಮಾರ್

Update: 2026-01-15 00:38 IST

ಬೆಂಗಳೂರು : ರಾಜ್ಯ ಸರಕಾರ ತನ್ನ ಒಳಜಗಳ ಹಾಗೂ ಹೈಕಮಾಂಡ್ ಮೆಚ್ಚಿಸುವುದಕ್ಕೆ ಕರ್ನಾಟಕದ ವಿಧಾನಮಂಡಲ ಸಂಸದೀಯ ಇತಿಹಾಸ ಹಾಗೂ ಸಂಪ್ರದಾಯವನ್ನು ಭಗ್ನಗೊಳಿಸಲು ಹೊರಟಿದೆ ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಟೀಕಿಸಿದ್ದಾರೆ.

ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾಮಾನ್ಯವಾಗಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಬಳಿಕ ಕನಿಷ್ಠ ಹತ್ತು ದಿನಗಳ ಕಾಲ ಕಲಾಪ ನಡೆಸಲಾಗುತ್ತಿತ್ತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಶಾಸಕರು ಕ್ಷೇತ್ರ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದು ಹಾಗೂ ಅದಕ್ಕೆ ಮುಖ್ಯಮಂತ್ರಿ ಸದನದಲ್ಲೆ ಉತ್ತರ ಕೊಡುವುದು ವಾಡಿಕೆ ಹಾಗೂ ಸದನದ ರೀತಿ ಎಂದು ಹೇಳಿದ್ದಾರೆ.

ಆದರೆ, ‘ವಿಬಿ: ಜಿ ರಾಮ್ ಜಿ’ ವಿಧೇಯಕದ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯುವ ನೆಪದಲ್ಲಿ ಜಂಟಿ ಅಧಿವೇಶನವನ್ನು ಸೀಮಿತಗೊಳಿಸಲಾಗಿದೆ. ಒಳಜಗಳಗಳಿಂದ ಹೈರಾಣಾಗಿರುವ ಅಧಿವೇಶನವನ್ನೂ ನಡೆಸದಷ್ಟು ಹತಾಷ ಹಾಗೂ ದುರ್ಬಲತೆಗೆ ಸರಕಾರ ಸಿಕ್ಕಿದ್ದು ನಾಡಿನ ದುರಂತ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ತರಾತುರಿಯಲ್ಲಿ ಜಂಟಿ ಅಧಿವೇಶನ ಕರೆಯುವ ಅನಿವಾರ್ಯತೆ ಏನಿತ್ತು ? ಸದನವನ್ನಾದರೂ ವ್ಯವಸ್ಥಿತವಾಗಿ ನಡೆಸುವುದು ನಿಮ್ಮ ಕರ್ತವ್ಯವಲ್ಲವೇ ? ಎಂದು ಪ್ರಶ್ನಿಸಿರುವ ಸುನಿಲ್ ಕುಮಾರ್, ವಿಬಿ: ಜಿ ರಾಮ್ ಜಿ ವಿಧೇಯಕದ ಬಗ್ಗೆ ಯಾವುದೇ ವೇದಿಕೆಯಲ್ಲಿ ಬೇಕಾದರೂ ಚರ್ಚೆ ನಡೆಸುವುದಕ್ಕೆ ಬಿಜೆಪಿ ಸಿದ್ದ. ಆದರೆ ಈ ಕಾಯ್ದೆ ವಿರುದ್ಧ ತುರ್ತಾಗಿ ನಿರ್ಣಯ ಅಂಗೀಕರಿಸಿಕೊಂಡು ರಾಜಕೀಯ ಹೋರಾಟ ಮಾಡಬೇಕೆಂಬುದೆ ಸರಕಾರದ ಉದ್ದೇಶವಾಗಿದೆ ಎಂದು ದೂರಿದ್ದಾರೆ.

ಶಾಸನ ಸಭೆಯ ರೀತಿ-ರಿವಾಜುಗಳು ಕಾಂಗ್ರೆಸ್ ಹೈಕಮಾಂಡ್ ಆಶಯಕ್ಕೆ ತಕ್ಕಂತೆ ನಡೆಸುವುದು ಸರಿ ಅಲ್ಲ. ಅಧಿವೇಶನದ ಅವಧಿಯನ್ನು ವಿಸ್ತರಿಸುವ ಜತೆಗೆ ನಾಡಿನ ಜ್ವಲಂತ ವಿಚಾರಗಳ ಚರ್ಚೆಗೆ ಅವಕಾಶ ನೀಡಬೇಕೆಂದು ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News