ಮೋಡ ಬಿತ್ತನೆ: ಮೇಲ್ವಿಚಾರಣೆ-ತಾಂತ್ರಿಕ ಮಾರ್ಗದರ್ಶನಕ್ಕಾಗಿ ಎರಡು ಸಮಿತಿಗಳ ರಚನೆ
ಸಾಂದರ್ಭಿಕ ಚಿತ್ರ (Credit: Gemini AI)
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಮಳೆ ಕೊರತೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರಕಾರ ಹಮ್ಮಿಕೊಂಡಿರುವ ಮೋಡ ಬಿತ್ತನೆ ಕಾರ್ಯಕ್ರಮದ ಸುಗಮ ಅನುಷ್ಠಾನ, ಉಸ್ತುವಾರಿ ಹಾಗೂ ತಾಂತ್ರಿಕ ಮಾರ್ಗದರ್ಶನಕ್ಕಾಗಿ ಸರ್ಕಾರವು ಎರಡು ಪ್ರತ್ಯೇಕ ಸಮಿತಿಗಳನ್ನು ಶುಕ್ರವಾರ ರಚಿಸಿ, ಆದೇಶ ಹೊರಡಿಸಿದೆ.
ಮೋಡ ಬಿತ್ತನೆ ಕಾರ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಮತ್ತು ಮಳೆ ಕೊರತೆ ಇರುವ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಈ ಸಮಿತಿಗಳು ಕಾರ್ಯನಿರ್ವಹಿಸಲಿವೆ.
ಮೇಲ್ವಿಚಾರಣಾ ಸಮಿತಿ (Monitoring Committee):
ಈ ಸಮಿತಿಯು ಮೋಡ ಬಿತ್ತನೆ ಕಾರ್ಯಕ್ರಮದ ಸಮಗ್ರ ಉಸ್ತುವಾರಿ, ಮೇಲ್ವಿಚಾರಣೆ ಹಾಗೂ ಪರಿಶೀಲನೆಯನ್ನು ನಡೆಸಲಿದೆ.
ಈ ಕಮಿಟಿಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು ಅಧ್ಯಕ್ಷರಾಗಿದ್ದು, ಒಟ್ಟು 6 ಮಂದಿ ಸದಸ್ಯರು, ಒಬ್ಬರು ಸದಸ್ಯ ಕಾರ್ಯದರ್ಶಿ ಇದ್ದಾರೆ. ಸದಸ್ಯರುಗಳಾಗಿ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ)ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳು,
ಕೃಷಿ ಇಲಾಖೆಯ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳು, ಕೆ ಎಸ್ ಎನ್ ಡಿಎಂಸಿ (KSNDMC ) ವ್ಯವಸ್ಥಾಪಕ ನಿರ್ದೇಶಕರುಗಳಿರಲಿದ್ದಾರೆ.
ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ.
ತಾಂತ್ರಿಕ ಸಲಹಾ ಮತ್ತು ಮೌಲ್ಯಮಾಪನ ಸಮಿತಿ (Technical Advisory & Evaluation Committee):
ಈ ಸಮಿತಿಯು ಕಾರ್ಯಕ್ರಮದ ತಾಂತ್ರಿಕ ವಿಷಯಗಳಲ್ಲಿ KSNDMC ಗೆ ಸಹಕಾರ, ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಲಿದೆ.
KSNDMC ನಿರ್ದೆಶಕರು ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಒಟ್ಟು 8 ಮಂದಿ ಸದಸ್ಯರೊಂದಿಗೆ ಒಬ್ಬರು ಸದಸ್ಯ ಕಾರ್ಯದರ್ಶಿ ಹಾಗೂ ಒಬ್ಬರು ವಿಶೇಷ ಆಹ್ವಾನಿತರಿದ್ದಾರೆ.
ಸದಸ್ಯರುಗಳಾಗಿ ಕೃಷಿ ಇಲಾಖೆ, ಹವಾಮಾನ ಕೇಂದ್ರ, (ಐಎಂಡಿ,) ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕರುಗಳಿದ್ದಾರೆ. ಐಐಎಸ್ ಸಿ(ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ) ಯ ಪ್ರಾಧ್ಯಾಪಕರಾದ ಪ್ರೊ. ನಾಗೇಶ್ ಕುಮಾರ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಜಿ.ಎಸ್. ಭಟ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿವೃತ್ತ ಇಂಜಿನಿಯರ್ ಇನ್ ಚೀಫ್ ಅಗಿದ್ದ ಎಚ್.ಎಸ್. ಪ್ರಕಾಶ್ ಕುಮಾರ್, ಪುಣೆಯ ಐಐಟಿಎಂ ( Indian institute of tropical meteorology ) ಜಂಟಿ ನಿರ್ದೇಶಕರ ದರ್ಜೆಗಿಂತ ಕಡಿಮೆಯಿಲ್ಲದ ಪ್ರತಿನಿಧಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಪರಿಸರ ಅಧಿಕಾರಿಗಳು ಸದಸ್ಯರಾಗಿದ್ದಾರೆ.
ಮಲಪ್ರಭಾ ಯೋಜನಾ ವಲಯದ (KNNL) ಮುಖ್ಯ ಇಂಜಿನಿಯರ್ ಸದಸ್ಯ ಕಾರ್ಯದರ್ಶಿ ಹಾಗೂ ಬೆಳಗಾವಿಯ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸಂಜೀವ್ ಸಂಗಮಿ ವಿಶೇಷ ಆಹ್ವಾನಿತರಾಗಿದ್ದಾರೆ.
ಯೋಜನೆ ವಿವರ
ಮೋಡ ಬಿತ್ತನೆ ಕಾರ್ಯಕ್ಕಾಗಿ ಒಟ್ಟು 28.52 ಕೋಟಿ ರೂ. (ಜಿಎಸ್ ಟಿ ಹೊರತುಪಡಿಸಿ) ಅಂದಾಜು ಮೊತ್ತದ ಆಡಳಿತಾತ್ಮಕ ಅನುಮೋದನೆಯನ್ನು ರಾಜ್ಯ ಸರಕಾರ ನೀಡಿದ್ದು, ಈ ಕಾರ್ಯಕ್ರಮವನ್ನು ಜಲಸಂಪನ್ಮೂಲ ಇಲಾಖೆಯ 'ಕರ್ನಾಟಕ ನೀರಾವರಿ ನಿಗಮ ನಿಯಮಿತ' (KNNL) ಮತ್ತು ಕಂದಾಯ ಇಲಾಖೆಯ 'ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ' (KSNDMC) ಜಂಟಿಯಾಗಿ ಅನುಷ್ಠಾನಗೊಳಿಸಲಿವೆ. M/s Kyathi Climate Modification Consultants (LLP) ಸಂಸ್ಥೆಯ ಮೂಲಕ ಈ ಸೇವೆಯನ್ನು ಪಡೆಯಲು ತೀರ್ಮಾನಿಸಲಾಗಿದ್ದು, ಪಾರದರ್ಶಕತೆ ಕಾಯ್ದೆಯಿಂದ (ಕೆಟಿಪಿಪಿ) ವಿನಾಯಿತಿ ನೀಡಲಾಗಿದೆ.