×
Ad

ವೈದ್ಯರು ಕಣ್ಣಿಗೆ ಕಾಣುವ ದೇವರು, ಜನರ ನಂಬಿಕೆ ಉಳಿಸಿಕೊಳ್ಳಿ : ಸಿಎಂ ಡಿ.ಕೆ.ಶಿವಕುಮಾರ್

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ 28ನೇ ಘಟಿಕೋತ್ಸವ

Update: 2026-06-16 14:32 IST

 ಬೆಂಗಳೂರು: “ವೈದ್ಯರು ಕಣ್ಣಿಗೆ ಕಾಣುವ ದೇವರು. ಜನ ಎಷ್ಟೇ ಕಷ್ಟ ಇದ್ದರೂ ಬಹಳ ನಂಬಿಕೆ ಹಾಗೂ ವಿಶ್ವಾಸದಿಂದ ವೈದ್ಯರ ಬಳಿ ಹೋಗುತ್ತಾರೆ. ನೀವು ಅವರ ನಂಬಿಕೆ ಉಳಿಸಿಕೊಂಡು ಸೇವೆ ಮಾಡಬೇಕು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ವೈದ್ಯ ಪದವೀಧರರಿಗೆ ಕಿವಿಮಾತು ಹೇಳಿದರು.

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಮಂಗಳವಾರ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶಿವಕುಮಾರ್ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯಪಾಲರ ಜತೆ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು

“ಈ ವೃತ್ತಿಯಲ್ಲಿ ನಿಮಗೆ ನಿತ್ಯ ಸವಾಲು ಎದುರಾಗುತ್ತದೆ. ನಿಮ್ಮ ಮುಂದೆ ದೊಡ್ಡ ಸ್ಪರ್ಧೆ ಇದೆ. ನಾನು ಬೇರೆ ದೇಶಗಳಲ್ಲಿ ಪ್ರವಾಸ ಮಾಡಿದ್ದೇನೆ. ಅಲ್ಲಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಭಾರತೀಯರು ಅದರಲ್ಲೂ ಕರ್ನಾಟಕದ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿರುವ ಗುಣಮಟ್ಟ ಭಾರತ ಮಾತ್ರವಲ್ಲ, ವಿಶ್ವದಲ್ಲೇ ಎಲ್ಲೂ ಇಲ್ಲ. ಇಲ್ಲಿ ತಯಾರಾದ ವೈದ್ಯರ ಪ್ರತಿಭೆ, ಗುಣಮಟ್ಟ, ಸೇವೆ ಹಾಗೂ ಬದ್ಧತೆಗೆ ಸರಿಸಾಟಿ ಯಾರೂ ಇಲ್ಲ” ಎಂದರು.

ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿ, ಜನ ನಗರಗಳತ್ತ ವಲಸೆ ಬರುವುದನ್ನು ತಪ್ಪಿಸಿ

“ಭಾರತ ಈಗ ಸಾಮಾಜಿಕ ಹಾಗೂ ತಂತ್ರಜ್ಞಾನ ಪರಿವರ್ತನೆಯ ತಿರುವಿನಲ್ಲಿದೆ. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅತ್ಯಾಧುನಿಕ ಅವಿಷ್ಕಾರ ಕಂಡಿದೆ. ನೀವು ಕೇವಲ ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುವುದರ ಬಗ್ಗೆ ಮಾತ್ರ ಗಮನ ಹರಿಸಬಾರದು. ಗ್ರಾಮೀಣ ಪ್ರದೇಶದಲ್ಲೂ ಆರೋಗ್ಯ ಸೇವೆ ಒದಗಿಸುವತ್ತ ಗಮನಹರಿಸಬೇಕು” ಎಂದು ಕರೆ ನೀಡಿದರು.

“ನಶೆ ಮುಕ್ತ ಭಾರತ, ನಶೆ ಮುಕ್ತ ಕರ್ನಾಟಕ, ನಶೆ ಮುಕ್ತ ಕ್ಯಾಂಪಸ್ ಮಾಡುವ ಅಭಿಯಾನ ಯಶಸ್ವಿಯಾಗಲಿ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ವೈದ್ಯರಾಗಿದ್ದು, ಬಹಳ ಆಸಕ್ತಿಯಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕು ಎಂದು ಈ ಖಾತೆ ಜವಾಬ್ದಾರಿ ಹೊತ್ತಿದ್ದಾರೆ. ಅವರ ಅವಧಿಯಲ್ಲಿ ಇಲಾಖೆಯನ್ನು ಬಹಳ ಶಿಸ್ತಿನಿಂದ ನಡೆಸುತ್ತಿದ್ದು, ಇಷ್ಟು ಶಿಸ್ತನ್ನು ನಾನು ಕಳೆದ 30 ವರ್ಷಗಳಲ್ಲಿ ನೋಡಿರಲಿಲ್ಲ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಗುಣಮಟ್ಟದ ಶಿಕ್ಷಕರೇ ವಿವಿಯ ಹೆಗ್ಗುರುತು

“ಯಾವುದೇ ಒಂದು ವಿವಿಯ ಶಕ್ತಿ ಎಂದರೆ ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯಲ್ಲ, ಪದವಿಗಳ ಸಂಖ್ಯೆಯೂ ಅಲ್ಲ. ಅಲ್ಲಿರುವ ಗುಣಮಟ್ಟದ ಶಿಕ್ಷಕರು. ಶಿಕ್ಷಕರು ವಿದ್ಯಾರ್ಥಿಗಳ ಮಾರ್ಗದರ್ಶಕರಾಗಬೇಕು, ಸಂಶೋಧನೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್ ಗಳಾಗಿರಬೇಕು. ಎಲ್ಲರೂ ಜತೆಯಾಗಿ ಕೆಲಸ ಮಾಡೋಣ. ಮುಂದೆ ನಾವು ನೀವೆಲ್ಲರೂ ರಾಮನಗರದ ಕ್ಯಾಂಪಸ್ ನಲ್ಲಿ ಸಿಗೋಣ. ಕರ್ನಾಟಕ ಸರ್ಕಾರ ಈ ವಿವಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲು ಬದ್ಧವಾಗಿದೆ” ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರತಿ ವರ್ಷ 13,940 ವೈದ್ಯರ ತಯಾರಿ

“ನಮ್ಮ ರಾಜ್ಯ ಪ್ರತಿ ವರ್ಷ 72 ಸಾವಿರ ಪದವೀಧರರನ್ನು ತಯಾರಿಸುತ್ತಿದೆ. ವರ್ಷಕ್ಕೆ 13,940 ವೈದ್ಯರನ್ನು ಕೊಡುಗೆಯಾಗಿ ನೀಡುತ್ತಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ವೈದ್ಯರನ್ನು ನೀಡುತ್ತಿರುವುದು ನಮ್ಮ ರಾಜ್ಯ. ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗೆ ಬಂದಾಗ, ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು, ನಂತರ ದೇಶದ ಇತರೆ ಭಾಗಗಳಿಗೆ ಹೋಗುತ್ತಿದ್ದರು. ಈಗ ಕಾಲ ಬದಲಾಗುತ್ತಿದೆ. ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ಭಾಗಗಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News