ಸರಕಾರ ನೆಲದ ಭಾಷೆಗೆ ಆದ್ಯತೆ ನೀಡುವ ಭಾಷಾ ನೀತಿ ರೂಪಿಸಲಿ : ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು : ನಮ್ಮ ಸರಕಾರ ನೆಲದ ಭಾಷೆಗೆ ಆದ್ಯತೆ ನೀಡುವ ರೀತಿಯಲ್ಲಿ ಭಾಷಾ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.
ರವಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಆಯೋಜಿಸಿದ್ದ ‘ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ’ ಕರ್ನಾಟಕದ ಸಾಧ್ಯತೆಗಳು-ಸವಾಲುಗಳು: ಒಂದು ದಿನದ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
ಮಾತೃ ಭಾಷೆ ಎನ್ನುವುದನ್ನು ತೆಗೆದ ರೀತಿಯಲ್ಲಿ ರಾಜ್ಯ ಭಾಷೆ, ಪರಿಸರ ಭಾಷೆ, ಪ್ರಾದೇಶಿಕ ಭಾಷೆ ಎನ್ನುವ ಪ್ರಯೋಗವನ್ನು ತಂದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಸುತ್ತೇವೆ ಎಂದು ಹೇಳುತ್ತಾರೆ, ಆದರೆ ಕಲಿಸುವುದಿಲ್ಲ. 1ರಿಂದ 9ನೇ ತರಗತಿಯವರೆಗೆ ಖಾಸಗಿ ಶಾಲೆಗಳಲ್ಲಿ ಸರಕಾರಿ ಪಠ್ಯಗಳನ್ನೇ ಅಳವಡಿಸಬೇಕು ಎಂದು ಸರಕಾರಕ್ಕೆ ಸಲಹೆ ನೀಡಲಾಗಿದ್ದು, ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ತಿಳಿಸಿದರು.
ಎಲ್ಲ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಕನಿಷ್ಠ ಒಂದು ಭಾಷೆಯನ್ನಾಗಿ ಕಲಿಸುವ ಅಗತ್ಯವಿದೆ. ಹಿಂದೆ ಸರಕಾರಿ ಶಾಲೆಗಳ ಸಬಲೀಕರಣ ವರದಿ ಕೊಟ್ಟಿದ್ದೇವೆ. ಅದರಲ್ಲಿ 21 ಅಂಶಗಳಿವೆ. ಸರಕಾರಿ ಶಾಲೆಗಳಲ್ಲಿನ ಕುಂದು ಕೊರತೆ, ಶಿಕ್ಷಕರ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರವೇ ರೂಪಿಸಿದ್ದ ಸಮಿತಿ ಸಿದ್ಧಪಡಿಸಿದ ವರದಿಯಾಗಿದೆ. ಅಂತಹ ವರದಿಯನ್ನು ತೆಗೆದುಕೊಂಡು ಸರಕಾರ ಸುಮ್ಮನೇ ಇರುವುದಾದರೆ, ಸರಕಾರ ಯಾಕೆ ಸಮಿತಿಯನ್ನು ರೂಪಿಸುತ್ತದೆ ಎಂದು ಪ್ರಶ್ನಿಸಿದರು.
ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಮಾತನಾಡಿ, ಇವತ್ತು ಕನ್ನಡ ಶಾಲೆಯಲ್ಲಿ ಬಹಳ ಘಟ್ಟಿಯಾಗಿ ನಡೆಯುತ್ತಿರುವುದು ದಕ್ಷಿಣಕನ್ನಡ ಜಿಲ್ಲೆಯಲ್ಲಿ. ಅಲ್ಲಿನ ತಾಯಿ ಭಾಷೆ ತುಳು, ಬ್ಯಾರಿ, ಕೊಂಕಣಿ ಆದರೆ ಅಲ್ಲಿನ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ ಹಳೆ ಮೈಸೂರಿನ ಭಾಗದವರು, ತಮ್ಮ ಮಕ್ಕಳನ್ನು ಬೇರೆ ಭಾಷೆಯ ಶಾಲೆಗಳಿಗೆ ಕಳಿಸುತ್ತಾರೆ ಎಂದು ತಿಳಿಸಿದರು.
ಹಿಂದಿ ಮಾತ್ರವಲ್ಲ, ಸಂಸ್ಕೃ ತದ ಹೇರಿಕೆಯ ಬಗ್ಗೆಯೂ ನಾವು ಗಮನವಹಿಸಬೇಕು. 8ರಿಂದ 10 ವರ್ಷದಲ್ಲಿ ಕೇಂದ್ರ ಸರಕಾರ ಸಂಸ್ಕೃತಕ್ಕೆ 2300 ಕೋಟಿ ರೂ. ಅನುದಾನ ಕೊಟ್ಟಿದೆ. ಆದರೆ ದ್ರಾವಿಡ ಭಾಷೆಗಳಿಗೆ ಅತ್ಯಂತ ಕಡಿಮೆ ಅನುದಾನವನ್ನು ಕೊಟ್ಟಿದೆ. ಹೇಗೆ ನಮ್ಮನ್ನು ತುಳಿಯುತ್ತಿದ್ದಾರೆ. ಇದು ದೊಡ್ಡ ಶತ್ರುವಾಗಿದೆ. ಸಂಸ್ಕೃತಕ್ಕೆ ಅನುದಾನ ಕೊಡುವುದು ನಮ್ಮ ಆಕ್ಷೇಪವಿಲ್ಲ. ಆದರೆ ಸಂಸ್ಕೃತಕ್ಕೆ ಕೊಟ್ಟಷ್ಟು ಅನುವಾನವನ್ನು ನಮ್ಮ ಭಾಷೆಗಳಿಗೂ ಕೊಡಬೇಕು ಎಂದು ಆಗ್ರಹಿಸಿದರು.
ಹಿರಿಯ ಸಾಹಿತಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಮುಖ್ಯಮಂತ್ರಿಗಳೇ ನೀಡಿರುವ ಒಂದು ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಒಬ್ಬನೇ ವಿದ್ಯಾರ್ಥಿ ಇಲ್ಲದಿರುವ 964 ಶಾಲೆಗಳಿವೆ. 1ರಿಂದ 5ರಷ್ಟು ವಿದ್ಯಾರ್ಥಿ ಇರುವ 3,642 ಶಾಲೆಗಳಿವೆ. 6ರಿಂದ 20 ಜನ ವಿದ್ಯಾರ್ಥಿಗಳು ಬರುವ ಶಾಲೆಗಳು ಸುಮಾರು 12ಸಾವಿರ ಶಾಲೆಗಳಿವೆ. ಯಾಕೆ ವಿದ್ಯಾಥಿಗಳು ಶಾಲೆಗೆ ಬರುತ್ತಿಲ್ಲ ಎಂಬುದರ ಬಗ್ಗೆ ಗಂಭೀರವಾದ ಚರ್ಚೆಯನ್ನು ಹಿಂದಿನ ಮುಖ್ಯಮಂತ್ರಿ ನಡೆಸಿಲ್ಲ. ಈಗಿನ ಮುಖ್ಯಮಂತ್ರಿ ನಡೆಸುತ್ತಾರೆಯೇ ಎಂಬುದನ್ನು ನೋಡಬೇಕು ಎಂದು ಹೇಳಿದರು.
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಕೆ.ವಿ.ನಾರಾಯಣ, ವಿಶ್ರಾಂತ ಕುಲಪತಿ ಹಿ.ಚಿ.ಬೋರಲಿಂಗಯ್ಯ, ಸಾಹಿತಿ ರಾಜಪ್ಪ ದಳವಾಯಿ, ಪತ್ರಕರ್ತ ಬಿ.ಎಂ.ಹನೀಫ್ ಮತ್ತಿತರರು ಉಪಸ್ಥಿತರಿದ್ದರು.