×
Ad

ಕೆಲವೇ ಗಂಟೆಗಳ ಅಂತರದಲ್ಲಿ ಎಐಸಿಸಿ ಅಧ್ಯಕ್ಷ, ಸಿಎಂ ಜತೆ ಚರ್ಚೆ: ಝಮೀರ್ ಅಹ್ಮದ್‍ಗೆ 2ನೇ ಹಂತದಲ್ಲಿ ಸಚಿವ ಸ್ಥಾನದ ವಿಶ್ವಾಸ?

Update: 2026-06-14 22:14 IST

ಬೆಂಗಳೂರು : ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಗೆ ಸ್ಥಾನ ದೊರೆಯುವ ವಿಶ್ವಾಸ ವ್ಯಕ್ತವಾಗಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ(ಶನಿವಾರ) ರಾತ್ರಿ ಕೆಲವೇ ಗಂಟೆಗಳ ಅಂತರದಲ್ಲಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಶನಿವಾರ ಸಂಜೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಚರ್ಚೆ ನಡೆಸಿದ ಝಮೀರ್ ಅಹ್ಮದ್ ಅವರು, ಅಲ್ಲಿಂದ ನೇರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಸಚಿವ ಸ್ಥಾನ ಕುರಿತು ಮನವಿ ಮಾಡಿದರು ಎನ್ನಲಾಗಿದೆ.

ಆನಂತರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕೆಲ ಹೊತ್ತು ಮಾತನಾಡಿದ ಝಮೀರ್, ಅಲ್ಲಿಂದಲೂ ಹೊರಟು ಮಾಜಿ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ನೇರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ತಡರಾತ್ರಿ ಭೇಟಿ ಮಾಡಿದಲ್ಲದೆ, ಎರಡನೇ ಹಂತದ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನದ ಕುರಿತು ಮನವರಿಕೆ ಮಾಡಿದರು ಎಂದು ಗೊತ್ತಾಗಿದೆ.

ಇದಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚರ್ಚಿಸಿ, ಸಹಮತ ವ್ಯಕ್ತಪಡಿಸುತ್ತೇನೆ ಎಂದು ಭರವಸೆ ನೀಡಿರುವುದಾಗಿ ಝಮೀರ್ ಅಹ್ಮದ್ ಖಾನ್ ಅವರ ಆಪ್ತರೊಬ್ಬರು ಹೇಳಿದ್ದಾರೆ.

ಡಿ.ಕೆ ಶಿವಕುಮಾರ್ ಸಂಪುಟದ ಎರಡನೆ ಹಂತದ ವಿಸ್ತರಣೆ ಸಮಯದಲ್ಲಿ ಝಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಕೂಗು ಈಗಾಗಲೇ ಕೇಳಿಬರುತ್ತಿದೆ. ಈ ಸಂಬಂಧವಾಗಿ ಪ್ರತಿಭಟನೆಗಳೂ ನಡೆದಿವೆ. ಆದಾಗ್ಯೂ, ಈ ಬಗ್ಗೆ ಸಿಎಂ ಆಗಲಿ ಅಥವಾ ಕಾಂಗ್ರೆಸ್ ಹೈಕಮಾಂಡ್ ನಾಯಕರಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ಶನಿವಾರ ತಡರಾತ್ರಿಯ ವರೆಗೂ ಮುಖ್ಯಮಂತ್ರಿ ಶಿವಕುಮಾರ್ ಅವರೊಂದಿಗೆ ಝಮೀರ್ ಅಹ್ಮದ್ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News