RSS ನ ಕಾನೂನುಬದ್ಧ ಸ್ಥಾನಮಾನ, ಹಣಕಾಸು ವಿವರ ಬಹಿರಂಗಪಡಿಸಿ : ಸರಸಂಘಚಾಲಕ ಮೋಹನ್ ಭಾಗವತ್ ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ
ಪ್ರಿಯಾಂಕ್ ಖರ್ಗೆ, ಮೋಹನ್ ಭಾಗವತ್
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾನೂನುಬದ್ಧ ಸ್ಥಾನಮಾನ, ಸಾಂಸ್ಥಿಕ ರಚನೆ, ಹಣಕಾಸಿನ ಮೂಲಗಳು, ವೆಚ್ಚ, ತೆರಿಗೆ ಪಾವತಿ ಮತ್ತು ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
RSS ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ಖರ್ಗೆ, ಸಂಘವು 100 ವರ್ಷಗಳ ಅಸ್ತಿತ್ವವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ, 60 ಸಾವಿರಕ್ಕೂ ಹೆಚ್ಚು ಶಾಖೆಗಳು ಮತ್ತು ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವುದಾಗಿ ಹೇಳಿಕೊಳ್ಳುವ ಸಂಘಟನೆ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾಂವಿಧಾನಿಕ ಅನುಸರಣೆಯ ಅತ್ಯುನ್ನತ ಮಾನದಂಡಗಳಿಗೆ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ನನ್ನ ಪತ್ರ ಶೀಘ್ರದಲ್ಲೇ ನಿಮಗೆ ತಲುಪಲಿದೆ. ಆದರೆ ಈ ವಿಷಯದ ಬಗ್ಗೆ ನಿಮ್ಮ ಗಮನವನ್ನು ಮೊದಲೇ ಸೆಳೆಯುವುದು ಮುಖ್ಯ ಎಂದು ಭಾವಿಸಿದ್ದೇನೆ’ ಎಂದು ಬರೆದಿದ್ದಾರೆ.
RSSನ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ (ABPS) 2025–26ರ ಕರ್ನಾಟಕ ವರದಿಯನ್ನು ಖರ್ಗೆ ಉಲ್ಲೇಖಿಸಿದ್ದಾರೆ. ವರದಿಯ ಪ್ರಕಾರ, ರಾಜ್ಯದಲ್ಲಿ ಸಂಘದ 4,127 ದೈನಂದಿನ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, 1,389 ಸಾಪ್ತಾಹಿಕ ಸಭೆಗಳು ಮತ್ತು 60 ಮಾಸಿಕ ಮಂಡಳಿಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಅಲ್ಲದೆ, 19,61,158 ಜನರ ಭಾಗವಹಿಸುವಿಕೆಯಲ್ಲಿ 2,194 ಸಮಾಜೋತ್ಸವಗಳನ್ನು ಆಯೋಜಿಸಲಾಗಿದೆ. 2,21,963 ಸಮವಸ್ತ್ರಧಾರಿ ಸ್ವಯಂಸೇವಕರ ಭಾಗವಹಿಸುವಿಕೆಯಲ್ಲಿ 562 ರೂಟ್ ಮಾರ್ಚ್‌ಗಳನ್ನು ರಾಜ್ಯದಾದ್ಯಂತ ನಡೆಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
‘ದೈನಂದಿನ ಶಾಖೆಗಳು, ಸಾಪ್ತಾಹಿಕ ಹಾಗೂ ಮಾಸಿಕ ಕಾರ್ಯಕ್ರಮಗಳು, ಸಾರ್ವಜನಿಕ ಸಮಾವೇಶಗಳು ಮತ್ತು ಸಮವಸ್ತ್ರಧಾರಿ ಮಾರ್ಗ ಮೆರವಣಿಗೆಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಇಂತಹ ದೊಡ್ಡ ಸಂಘಟನೆಯನ್ನು ಕೇವಲ ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅದರ ಕಾನೂನುಬದ್ಧ ಸ್ಥಾನಮಾನ, ಹೊಣೆಗಾರಿಕೆ, ಹಣಕಾಸಿನ ಪಾರದರ್ಶಕತೆ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಪಡೆಯುವ ಅನುಮತಿಗಳು ಹಾಗೂ ಸಂವಿಧಾನ ಮತ್ತು ಕಾನೂನುಗಳ ಪಾಲನೆ ಕುರಿತು ಸಹಜವಾಗಿಯೇ ಪ್ರಶ್ನೆಗಳು ಉದ್ಭವಿಸುತ್ತವೆ’ ಎಂದು ಖರ್ಗೆ ಹೇಳಿದ್ದಾರೆ.
ಇಂತಹ ಬೃಹತ್ ಸಂಘಟನೆಯು ಕಾನೂನು ಘಟಕವಾಗಿ ಅಥವಾ ‘ವ್ಯಕ್ತಿಗಳ ಸಂಘ’ವಾಗಿ ಔಪಚಾರಿಕವಾಗಿ ನೋಂದಾಯಿಸದೆ ಕಾರ್ಯನಿರ್ವಹಿಸುತ್ತಿದ್ದರೆ, ಅದಕ್ಕೆ ಇರುವ ಕಾನೂನು ಆಧಾರವನ್ನು ವಿವರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆ ಕಾನೂನಿಗಿಂತ ಮೇಲಲ್ಲ. ಅದು ಎಷ್ಟೇ ದೊಡ್ಡದಾಗಿರಲಿ ಅಥವಾ ಪ್ರಭಾವಶಾಲಿಯಾಗಿರಲಿ, ಸಾರ್ವಜನಿಕ ಜೀವನದಲ್ಲಿ ಕಾರ್ಯನಿರ್ವಹಿಸುವ ಎಲ್ಲ ವ್ಯಕ್ತಿಗಳು ಮತ್ತು ಸಂಘಟನೆಗಳು ಕಾನೂನನ್ನು ಪಾಲಿಸಲೇಬೇಕು. RSS ಕೂಡ ಅದಕ್ಕೆ ಹೊರತಲ್ಲ’ ಎಂದು ಖರ್ಗೆ ಹೇಳಿದ್ದಾರೆ.
ಭಾರತದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಫಾಯಿ ಕರ್ಮಚಾರಿಯೂ ನೋಂದಾಯಿಸಿಕೊಳ್ಳಬೇಕು. ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳು, ಟ್ರಸ್ಟ್‌ಗಳು, ಎನ್‌ಜಿಒಗಳು, ಸೊಸೈಟಿಗಳು ಮತ್ತು ಕಂಪನಿಗಳು ತಮ್ಮ ಚಟುವಟಿಕೆಗಳು ಹಾಗೂ ಹಣಕಾಸಿನ ವಿವರಗಳನ್ನು ಕಾನೂನಿನ ಪ್ರಕಾರ ಬಹಿರಂಗಪಡಿಸಬೇಕಾಗುತ್ತದೆ. ಇಂತಹ ನಿಯಮಗಳು ಎಲ್ಲರಿಗೂ ಅನ್ವಯವಾಗುವಾಗ RSSಗೆ ಮಾತ್ರ ವಿನಾಯಿತಿ ಏಕೆ ಇರಬೇಕು ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ RSSನ ಕಾನೂನುಬದ್ಧ ಸ್ಥಾನಮಾನ, ಸಾಂಸ್ಥಿಕ ರಚನೆ ಮತ್ತು ಪದಾಧಿಕಾರಿಗಳ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.
ದೇಣಿಗೆಗಳು ಹಾಗೂ ಇತರ ಆದಾಯದ ಮೂಲಗಳು, ವೆಚ್ಚ ಮತ್ತು ಆಸ್ತಿಗಳ ವಿವರಗಳು, ತೆರಿಗೆ ಪಾವತಿ ಕುರಿತ ಮಾಹಿತಿಯನ್ನೂ ಸಾರ್ವಜನಿಕಗೊಳಿಸಬೇಕು ಎಂದು ಹೇಳಿದ್ದಾರೆ.
ಅಲ್ಲದೆ, ಔಪಚಾರಿಕ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸಲು ಇರುವ ಕಾನೂನು ಆಧಾರ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು, ಮಾರ್ಗ ಮೆರವಣಿಗೆಗಳು ಮತ್ತು ಸಾಮೂಹಿಕ ಸಭೆಗಳಿಗೆ ಪಡೆದಿರುವ ಅನುಮತಿಗಳ ವಿವರಗಳನ್ನೂ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯತೆ, ಶಿಸ್ತು ಮತ್ತು ಕರ್ತವ್ಯದ ಮೌಲ್ಯಗಳನ್ನು ಪ್ರತಿಪಾದಿಸುವ RSS ಪಾರದರ್ಶಕತೆ ಮತ್ತು ಕಾನೂನು ಪಾಲನೆಯ ವಿಷಯದಲ್ಲೂ ಮಾದರಿಯಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಾಮಾನ್ಯ ನಾಗರಿಕರು, ಧಾರ್ಮಿಕ ಸಂಸ್ಥೆಗಳು, ಎನ್‌ಜಿಒಗಳು, ಟ್ರಸ್ಟ್ ಗಳು ಮತ್ತು ಕಂಪನಿಗಳು ನೋಂದಣಿ, ಲೆಕ್ಕಪರಿಶೋಧನೆ ಹಾಗೂ ತೆರಿಗೆ ನಿಯಮಗಳಿಗೆ ಒಳಪಡುವಂತೆ, RSS ಕೂಡ ಅದೇ ಮಾನದಂಡಗಳನ್ನು ಪಾಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶತಮಾನೋತ್ಸವದ ಸಂದರ್ಭದಲ್ಲಿ RSS ತನ್ನ ಸಂಘಟನಾ ಹಾಗೂ ಹಣಕಾಸು ವಿವರಗಳನ್ನು ಬಹಿರಂಗಪಡಿಸಬೇಕು. ಜೊತೆಗೆ, ಅನ್ವಯವಾಗುವ ಕಾನೂನು ಮತ್ತು ತೆರಿಗೆ ನಿಯಮಗಳನ್ನು ಪಾಲಿಸಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಖರ್ಗೆ ಪತ್ರದಲ್ಲಿ ಹೇಳಿದ್ದಾರೆ.
ಈ ಎಲ್ಲ ವಿಷಯಗಳ ಕುರಿತು RSSನಿಂದ ಔಪಚಾರಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿರುವುದಾಗಿ ಅವರು ಹೇಳಿದ್ದಾರೆ.