×
Ad

ಪ್ರತಿಭೆ ಯಾರ ಸ್ವತ್ತೂ ಅಲ್ಲ, ಅವಕಾಶ ಸಿಕ್ಕರೆ ಎಲ್ಲರ ಪ್ರತಿಭೆಯೂ ಹೊರಗೆ ಬರುತ್ತದೆ : ಸಿಎಂ ಸಿದ್ದರಾಮಯ್ಯ

Update: 2025-05-29 14:55 IST

ಬೆಂಗಳೂರು: ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶ ಸಿಕ್ಕರೆ ಎಲ್ಲರ ಪ್ರತಿಭೆಯೂ ಹೊರಗೆ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಶಾಲಾ ಶೈಕ್ಷಣಿಕ ವರ್ಷದ ಪುನರಾರಂಭದ ಪ್ರಯುಕ್ತ ಆಡುಗೋಡಿಯ ಕರ್ನಾಟಕ ಸರಕಾರಿ ಕನ್ನಡ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಶಾಲಾ ಕೊಠಡಿಗಳ ಪರಿಶೀಲನೆ ನಡೆಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ವರಿಗೂ ಶಿಕ್ಷಣ ಕೊಡುವುದು ಸರಕಾರದ ಜವಾಬ್ದಾರಿ. ಶಿಕ್ಷಣ ಕೇವಲ ಜ್ಞಾನ ಕೊಡುವುದಿಲ್ಲ, ವ್ಯಕ್ತಿತ್ವವನ್ನು ರೂಪಿಸುತ್ತದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳಲೇಬೇಕು. ಇದರಿಂದ ಸ್ವಾಭಿಮಾನ ಬೆಳೆದು ಸಮಾಜದ ಆಸ್ತಿಯಾಗುತ್ತೇವೆ ಎಂದರು.

ಡಾ.ಬಾಬಾ ಸಾಹೇಬರು ದೇಶ ಕಂಡ ಮಹಾನ್ ವಿದ್ವಾಂಸರಲ್ಲಿ ಒಬ್ಬರು. ಪ್ರತಿಭೆ ಯಾರ ಸ್ವತ್ತೂ‌ ಅಲ್ಲ. ಅವಕಾಶ ಸಿಕ್ಕರೆ ಎಲ್ಲರ ಒಳಗಿರುವ ಪ್ರತಿಭೆಯೂ ಹೊರಗೆ ಬರುತ್ತದೆ. ಅಂಬೇಡ್ಕರ್ ಅವರು ಕೊಟ್ಟಂತಹ ಸಂವಿಧಾನವನ್ನೂ ಎಲ್ಲರೂ ಪಾಲಿಸಬೇಕು ಎಂದರು.

ಜಾತಿ, ವರ್ಗ ಮುಕ್ತ ಸಮ ಸಮಾಜ ನಿರ್ಮಾಣ ಆಗಬೇಕು ಎನ್ನುವುದು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.

1992-93 ರಲ್ಲಿ ನಾನು ಹಣಕಾಸು ಮಂತ್ರಿಯಾಗಿದ್ದಾಗ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಲು ಹಣಕಾಸು ಅನುಮೋದನೆ ನೀಡಿದ್ದೆ ಎಂದು ಸ್ಮರಿಸಿದರು.

ಮಕ್ಕಳಿಗೆ ಉತ್ತಮ‌ ಪೌಷ್ಠಿಕಾಂಶ ಸಿಕ್ಕರೆ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಿ ಓದಲು ಸಾಧ್ಯ. ಈ‌ ಕಾರಣಕ್ಕೇ ನಾವು ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ, ಹಾಲು ಕೊಡುತ್ತಿದ್ದೇವೆ. ಇದರ ಜೊತೆಗೆ ಪಠ್ಯ, ಸಮವಸ್ತ್ರ, ಶೂ, ಸಾಕ್ಸ್, ಪುಸ್ತಕಗಳನ್ನೂ ಸರಕಾರದಿಂದಲೇ ಕೊಡುತ್ತಿದ್ದೇವೆ ಎಂದರು.

ಹೆಚ್ಚೆಚ್ಚು ಭಾಷೆ ಕಲಿಯಿರಿ : ಕನ್ನಡದಲ್ಲಿ ಮುಂದಿರಿ

ಮಕ್ಕಳು ಎಷ್ಟು ಭಾಷೆ ಕಲಿತರೂ ಒಳ್ಳೆಯದೆ. ಹೆಚ್ಚೆಚ್ಚು ಭಾಷೆ ಕಲಿತು ಕನ್ನಡದಲ್ಲಿ ಮುಂದಿರಿ. ಕನ್ನಡದಲ್ಲಿ ಕಲಿತರೆ ಮಕ್ಕಳು ಪ್ರತಿಭಾವಂತರಾಗುವುದಿಲ್ಲ ಎನ್ನುವುದು ತಪ್ಪು. ವೈಜ್ಞಾನಿಕ ಶಿಕ್ಷಣ ಪಡೆದು, ವೈಜ್ಞಾನಿಕ‌ ಗುಣಮಟ್ಟ ಬೆಳೆಸಿಕೊಂಡರೆ ಮಕ್ಕಳು ಉತ್ತಮ ಪ್ರತಿಭಾವಂತರಾದಂತೆ. ಆದ್ದರಿಂದ ಸರಕಾರಿ ಶಾಲೆಗಳ ಹಾಜರಾತಿ ಹೆಚ್ಚಾಗಬೇಕು ಎಂದು ಹೇಳಿದರು.

ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಈ ಬಾರಿಯೂ 725 ಕೋಟಿ ಹಣ ಕೊಟ್ಟಿದ್ದೇವೆ. ಕಳೆದ ವರ್ಷವೂ ಕೊಟ್ಟಿದ್ದೇವೆ. ಗುಣಮಟ್ಟದಲ್ಲಿ ಸರಕಾರಿ ಶಾಲೆಗಳು ಹಿಂದುಳಿದಿಲ್ಲ ಎಂದರು.

ಗ್ರೇಸ್ ಮಾರ್ಕ್ಸ್ ಇಲ್ಲದೆ ಮಕ್ಕಳು ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರಯತ್ನಿಸುತ್ತಿದೆ. ಎರಡನೇ ಮತ್ತು ಮೂರನೇ ಸಪ್ಲಿಮೆಂಟರಿ ಪರೀಕ್ಷೆಗಳಿಗೆ ಶುಲ್ಕ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News