ಡಾ.ಜಿ.ಪರಮೇಶ್ವರ್

ಬೆಂಗಳೂರು: ಪ್ರತಿನಿತ್ಯ ಅನೇಕ ಶಾಸಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಅವರು ಶಾಸಕರೊಂದಿಗೆ ಸಭೆ ನಡೆಸಲಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರದ ನಿವಾಸದ ಬಳಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬ್ಯಾಚ್ ಟು ಬ್ಯಾಚ್ ರೀತಿಯಲ್ಲಿ ಸಂಜೆವರೆಗೆ ಶಾಸಕರೊಂದಿಗೆ ಸಭೆ ನಡೆಯಲಿದ್ದು, ಪ್ರತಿಯೊಬ್ಬ ಶಾಸಕರ ಸಮಸ್ಯೆಗಳನ್ನು ಆಲಿಸಿ ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಶಾಸಕರನ್ನಷ್ಟೇ ಸಭೆಗೆ ಆಹ್ವಾನಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಡಳಿತ ಪಕ್ಷವಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಜನರು ಅಭಿವೃದ್ಧಿಯ ನಿರೀಕ್ಷೆಯಿಂದ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಆದ್ದರಿಂದ ಆಡಳಿತ ಪಕ್ಷದ ಶಾಸಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದು ಸಹಜ ಎಂದರು.

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಸಚಿವರಿಗೆ ಜವಾಬ್ದಾರಿ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ಜಿಲ್ಲೆಗೆ ಒಬ್ಬ ಸಚಿವರನ್ನು ನೇಮಿಸಲಾಗಿದ್ದು, ಅವರು ಪಕ್ಷದ ಸಂಘಟನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ರಾಜ್ಯದ ಬರ ಪರಿಸ್ಥಿತಿ ಕುರಿತು ಮಾತನಾಡಿದ ಡಿಸಿಎಂ, ಮಾನದಂಡಗಳ ಪ್ರಕಾರ ಪ್ರಸ್ತುತ 102 ತಾಲೂಕುಗಳು ಬರಪೀಡಿತ ಎಂದು ಗುರುತಿಸಲಾಗಿವೆ. ಗ್ರೌಂಡ್ ಟ್ರೂಥಿಂಗ್ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರ್ಕಾರಕ್ಕೆ ಸಮಗ್ರ ಬರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹನೂರು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಪ್ರಕರಣಗಳಲ್ಲಿ ಸರ್ಕಾರಕ್ಕೆ ಅನುಮಾನಗಳು ಮೂಡಿದಾಗ ಸಿಐಡಿ ತನಿಖೆಗೆ ಒಪ್ಪಿಸುವುದು ಸಾಮಾನ್ಯ ಕ್ರಮವಾಗಿದ್ದು, ಈ ಪ್ರಕರಣದಲ್ಲೂ ಅದೇ ವಿಧಾನ ಅನುಸರಿಸಲಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor