'ದತ್ತೂರಿ ಹಣ್ಣು' ಮಾರಾಟಕ್ಕೆ ನಿರ್ಬಂಧ: ಅಮೆಝಾನ್ ಸಹಿತ ಇ-ಕಾರ್ಮಸ್ ಕಂಪೆನಿಗಳಿಗೆ ನೋಟಿಸ್
Photo credit : timesofindia
ಬೆಂಗಳೂರು: ವಿಷಕಾರಿ ಗುಣವುಳ್ಳ ದತ್ತೂರಿ ಹಣ್ಣು ಹಾಗೂ ಬೀಜ ಮಾರಾಟ ಮಾಡದಂತೆ ಇ ಕಾಮರ್ಸ್ ಕಂಪೆನಿಗಳಿಗೆ ಆಹಾರ ಸುರಕ್ಷತಾ ಇಲಾಖೆ ವತಿಯಿಂದ ನೋಟಿಸ್ ನೀಡಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಇ-ಕಾಮರ್ಸ್ ಕಂಪೆನಿಗಳು ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಮಾರಾಟ ಮಾಡುತ್ತಿರುವುದು ಇಲಾಖೆ ತನಿಖೆಯಿಂದ ದೃಢಪಟ್ಟಿತ್ತು.
ಆ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ದತ್ತೂರಿ ಹಣ್ಣನ್ನು ಮಾರಾಟ ಮಾಡುವಂತಿಲ್ಲ ಎಂದು ಕಂಪೆನಿಗಳಿಗೆ ಇಲಾಖೆ ನಿರ್ದೇಶನ ನೀಡಿದೆ.
ಈ ಹಣ್ಣು ಮತ್ತು ಬೀಜಗಳು ವಿಷಕಾರಿ ಗುಣ ಲಕ್ಷಣಗಳನ್ನು ಹೊಂದಿವೆ. ಅವುಗಳನ್ನು ಸೇವನೆ ಮಾಡುವುದರಿಂದ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತವೆ ಎಂದು ತಿಳಿಸಲಾಗಿದೆ.
ಈ ಉತ್ಪನ್ನಕ್ಕೆ ಸಂಬಂಧಿಸಿದ ಜಾಹೀರಾತನ್ನು ತೆಗೆಯುವಂತೆ ಕಂಪೆನಿಗಳಿಗೆ ಸೂಚಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಇ-ಕಾಮರ್ಸ್ ಕಂಪೆನಿಗಳಿಗೆ ನೋಟಿಸ್ ನಲ್ಲಿ ಸೂಚನೆ ನೀಡಲಾಗಿದೆ.