×
Ad

ಧರ್ಮಸ್ಥಳ ದೂರು | ಎಸ್‌ಐಟಿ ಸಹಾಯವಾಣಿ ರಚಿಸಲು ಸುಜಾತಾ ಭಟ್ ಅವರ ವಕೀಲರಿಂದ ಸರ್ಕಾರಕ್ಕೆ ಮನವಿ

Update: 2025-07-22 10:15 IST

ಮಂಗಳೂರು, ಜು.22: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುಗಳನ್ನು ದಾಖಲಿಸಲು ಸಹಾಯವಾಣಿ ರಚಿಸುವಂತೆ ಸುಜಾತಾ ಭಟ್ ಅವರ ಪರ ವಕೀಲರಾದ ಮಂಜುನಾಥ್ ಎನ್ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸೋಮವಾರ ತಡರಾತ್ರಿ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಧರ್ಮಸ್ಥಳದಲ್ಲಿ ನಡೆದಿದೆ ಎಂದು ಆರೋಪಿಸಿರುವ ಸಾಮೂಹಿಕವಾಗಿ ಹೂತುಹಾಕಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸರ್ಕಾರವು ಈಗಾಗಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಅನನ್ಯ ಭಟ್ ಪ್ರಕರಣದ ತನಿಖೆಯನ್ನೂ ಅದೇ ತಂಡಕ್ಕೆ ಹಸ್ತಾಂತರಿಸಿದೆ. ಈ ಹಿನ್ನೆಲೆಯಲ್ಲಿ, ಇದೇ ರೀತಿಯ ಭಯಾನಕ ಅನುಭವಗಳನ್ನು ಎದುರಿಸಿದ ಕೆಲವು ಕುಟುಂಬಗಳು ತಮ್ಮ ದೂರುಗಳನ್ನು ನೇರವಾಗಿ ಪೊಲೀಸರಿಗೆ ಸಲ್ಲಿಸಲು ಮನವಿ ಮಾಡಿದ್ದರೂ, ಸ್ಥಳೀಯ ಠಾಣೆಗಳಿಗೆ ಹೋಗುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ವೈಯಕ್ತಿಕವಾಗಿ ಹಲವು ಸಂತ್ರಸ್ತರ ಸಂಬಂಧಿಕರು ಕರೆ ಮಾಡಿ ತಮಗೆ ತಿಳಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ಎಸ್‌ಐಟಿ ತನಿಖೆಯ ವ್ಯಾಪ್ತಿ ವ್ಯಾಪಕವಾಗಿರುವುದರಿಂದ ಸಾರ್ವಜನಿಕರು ಸುಲಭವಾಗಿ ಸಂಪರ್ಕಿಸಬಹುದಾದ ಸಹಾಯವಾಣಿಯನ್ನು ತಕ್ಷಣ ಸ್ಥಾಪಿಸಬೇಕು.

ಅದರ ಪ್ರಚಾರ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಕೀಲರಾದ ಮಂಜುನಾಥ್ ಎನ್ ಅವರು ಮನವಿ ಮಾಡಿದ್ದಾರೆ.

ಎಸ್‌ಐಟಿ ಕಚೇರಿಯು 'ಪೊಲೀಸ್ ಠಾಣೆ'ಯಂತೆ ಕಾರ್ಯನಿರ್ವಹಿಸುವ, ಆದರೆ ಸ್ವತಃ 'ಪೊಲೀಸ್ ಠಾಣೆ' ಎಂದು ಅಧಿಸೂಚನೆಗೊಳ್ಳದ ಪ್ರಕರಣಗಳಲ್ಲಿ, ಆರೋಪಿಗಳು ಅದನ್ನು ದುರುಪಯೋಗಪಡಿಸಿಕೊಂಡು ನ್ಯಾಯಾಲಯಗಳಿಂದ ತಡೆಯಾಜ್ಞೆಗಳನ್ನು ಪಡೆಯುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ದೂರು ಸ್ವೀಕರಿಸಲು ಅನುಕೂಲವಾಗುವಂತೆ ಎಸ್‌ಐಟಿ ಕಚೇರಿಗೆ ಅಧಿಕೃತವಾಗಿ 'ಪೊಲೀಸ್ ಠಾಣೆ' ಸ್ಥಾನಮಾನ ನೀಡುವಂತೆ ಅವರು ಕೋರಿದ್ದಾರೆ.

2003 -2004 ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ ಅವರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿರುವ, ಅವರ ತಾಯಿ ಸುಜಾತಾ ಭಟ್ ಅವರಿಗೆ ಮಂಜುನಾಥ್ ಎನ್ ಅವರು ವಕೀಲರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News