×
Ad

ಗೂಂಡಾಗಳಿಗೆ ಬೆಂಬಲಿಸುವ ರಾಜಕಾರಣಿಗಳು ಗಡಿಪಾರಾಗಲಿ : ದಿನೇಶ್ ಅಮೀನ್‍ ಮಟ್ಟು

Update: 2025-06-03 21:34 IST

ಬೆಂಗಳೂರು : ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ಹಿಂಸೆಯನ್ನು ತಡೆಯಲು, ಅಧಿಕಾರಿಗಳು ಅಥವಾ ಗೂಂಡಾಗಳನ್ನು ಗಡಿಪಾರಿ ಮಾಡಿದರೆ ಆಗುವುದಿಲ್ಲ. ಗೂಂಡಾಗಳಿಗೆ ಬೆಂಬಲಿಸುವ ರಾಜಕೀಯ ನಾಯಕರನ್ನು ಗಡಿಪಾರು ಮಾಡಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ಆಶೀರ್ವಾದ್ ಸೆಂಟರ್‌ನಲ್ಲಿ ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ಹಿಂಸೆಯ ವಿರುದ್ಧ ಆಯೋಜಿಸಿದ್ದ ಸಾಹಿತಿ, ಚಿಂತಕರು ಹಾಗೂ ಸಮಾನ ಮನಸ್ಕರ ‘ಸಮಾಲೋಚನಾ ಸಭೆ’ಯಲ್ಲಿ ಅವರು ಮಾತನಾಡಿದರು.

ಎಲ್ಲೆಲ್ಲಿ ಅಕ್ರಮ ಚಟುವಟಿಕೆಗಳಿಂದ ಸಂಪತ್ತು ಸಂಗ್ರಹ ಆಗುತ್ತದೆಯೋ ಅಲ್ಲಿ ಕೆಟ್ಟದ್ದು ಮಾತ್ರ ಆಗುತ್ತದೆ. ಕೋಮುವಾದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ, ಹಿರಿಯ ಸಾಹಿತಿಗಳು, ಪ್ರಗತಿಪರರು ಸೇರಿಕೊಂಡು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹಸಚಿವರಿಗೆ ದಾಖಲೆಗಳ ಸಮೇತ ದಕ್ಷಿಣ ಕನ್ನಡದ ಕೋಮು ಹಿಂಸೆಯನ್ನು ತಡೆಯುವಂತೆ ಒತ್ತಾಯಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚಿಗೆ ನಡೆದಿರುವ ಕೊಲೆಗಳು, ಪೊಲೀಸರು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ದಾಖಲೆಯನ್ನು ಸಿದ್ಧಪಡಿಸಬೇಕು. ಜತೆಗೆ ಮಂಗಳೂರಿನಲ್ಲಿ ಸೌಹಾರ್ದ ಮೆರವಣಿಗೆ ಮಾಡಬೇಕು. ತಪ್ಪು ಮಾಹಿತಿಯ ಮೂಲಕ ಕೋಮುದ್ವೇಷ ಉಂಟಾಗುತ್ತಿದೆ. ಅದಕ್ಕಾಗಿ ಆ ಸಮುದಾಯದ ಹಿರಿಯರು ಅಲ್ಲಿನ ಯುವಜನರಿಗೆ ಅರಿವು ಮೂಡಿಸಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ದ್ವೇಷ ಭಾಷಣ ಅಥವಾ ಸುಳ್ಳು ಸುದ್ದಿ ಹಂಚಿಕೆ ಮಾಡುವವರ ವಿರುದ್ಧ ನಾಗರಿಕರು ಸತ್ಯವಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಆ ದಾಖಲೆಯಿಂದ ಕೆಲಸ ಮಾಡುವ ವಕೀಲರ ತಂಡವನ್ನು ರಚನೆ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಹಣವನ್ನು ಕೂಡ ಸಂಗ್ರಹಿಸಿಕೊಳ್ಳೋಣ. ಇಷ್ಟನ್ನು ಮಾಡಿ ಬದಲಾವಣೆಯಾಗದಿದ್ದರೆ, ಸರಕಾರವನ್ನು ಒತ್ತಾಯಿಸಲು ಒಂದು ತಂಡವನ್ನು ಕೂಡ ರಚಿಸಿಕೊಳ್ಳೋಣ ಎಂದು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ಇಂಟಲಿಜೆನ್ಸ್ ಮುಖ್ಯಮಂತ್ರಿಗಳ ಅಧೀನದಲ್ಲೇ ಇರುತ್ತದೆ. ಪ್ರಪಂಚದ ಎಲ್ಲ ವಿಷಯಗಳು ಇಂಟಲಿಜೆನ್ಸ್‌ ಗೆ ತಿಳಿದಿರಬೇಕು. ಅವರಿಗೆ ರಾಜಕೀಯ ವಿಚಾರಗಳು ಮಾತ್ರವೇ ಗೊತ್ತಿರುತ್ತವೆ. ಕೋಮು ಪ್ರಕ್ಷುಬ್ಧ ಸ್ಥಳಗಳಲ್ಲಿ ಸೌಹಾರ್ದದ ಕರಪತ್ರಗಳನ್ನು ಹಂಚಬೇಕು. ಪೊಲೀಸ್ ಇಲಾಖೆಯಲ್ಲಿಯೇ ಕೋಮು ಗಲಭೆಯಲ್ಲಿ ಭಾಗಿಯಾದವರು ಇರುತ್ತಾರೆ. ಅಂತವರನ್ನು ಗುರುತಿಸಬೇಕು. ಕಮ್ಯುನಲ್ ಗೂಂಡಾಗಳಿಗೆ ರಕ್ಷಣೆಯನ್ನು ನೀಡಬಾರದು ಎಂದು ತಿಳಿಸಿದರು.

ಸಮಾಲೋಚನಾ ಸಭೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಪತ್ರಕರ್ತ ನವೀನ್ ಸೂರಿಂಜೆ, ಪ್ರಾಧ್ಯಾಪಕ ಎ.ನಾರಾಯಣ, ವಕೀಲ ವಿನಯ್ ಶ್ರೀನಿವಾಸ್, ಕನ್ನಡಪರ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್, ಕಾಂಗ್ರೆಸ್ ವಕ್ತಾರ ನಿಕೇತ್‍ರಾಜ್ ಮೌರ್ಯ, ಭವ್ಯ ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಸೌಹಾರ್ದ ನಡಿಗೆ, ಕಾರ್ಯಕ್ರಮ ಆಯೋಜನೆಯ ಚರ್ಚೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುದ್ವೇಷವನ್ನು ತಡೆಯಲು ಮಂಗಳೂರಿನಲ್ಲಿ ಸೌಹಾರ್ದ ನಡಿಗೆ, ಸಮಾವೇಶ, ಹಾಗೂ ಶಾಲಾ ಕಾಲೇಜು ಇತ್ಯಾದಿ ಕಡೆಗಳಲ್ಲಿ ಸೌಹರ್ದದ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎನ್ನುವ ಚರ್ಚೆ ಸಭೆಯಲ್ಲಿ ನಡೆಸಲಾಯಿತು.

ಕಾನೂನು ಸಚಿವಾಲಯ ಕಾನೂನನ್ನು ರಚನೆ ಮಾಡಬೇಕು. ಆದರೆ ಸಂಘಪರಿವಾರದವರನ್ನು ಇಟ್ಟುಕೊಂಡು ಬಿಎನ್‌ಎಸ್‌, ಬಿಎನ್‌ಎಸ್‌ಎಸ್ ಮಾಡಲಾಗಿದೆ. 173 ಬಿಎನ್‌ಎಸ್ಎಸ್ ಬಂಧಿಸುವ ಮತ್ತು ಎಫ್‌ಐಆ‌ರ್ ಮಾಡುವ ಅಧಿಕಾರ ತೆಗೆದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉದ್ದೇಶ ಕೋಮು ದ್ವೇಷದ ಭಾಷಣ ಮಾಡುವವರಿಗೆ ರಕ್ಷಣೆ ನೀಡುವುದಾಗಿದೆ. ಕೋಮು ದ್ವೇಷ ಭಾಷಣವನ್ನುತಡೆಯಲು ಕರ್ನಾಟಕ ಸರಕಾರದ ಕಾ ಕೋಕಾ ಕಾಯ್ದೆಗೆ ತಿದ್ದುಪಡಿ ತರಬೇಕು.

-ಎಸ್.ಬಾಲನ್, ಹಿರಿಯ ವಕೀಲ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News