×
Ad

ನಮ್ಮ ಸರಕಾರ ಪೌರ ಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತಂದಿದೆ : ಡಿಸಿಎಂ ಡಿ.ಕೆ ಶಿವಕುಮಾರ್

Update: 2025-05-01 15:11 IST

ಬೆಂಗಳೂರು :“ನಮ್ಮ ಸರಕಾರ ಕೊಟ್ಟ ಮಾತಿನಂತೆ ಪೌರ ಕಾರ್ಮಿಕರನ್ನು ಖಾಯಂ ಮಾಡುವ ಮೂಲಕ ಅವರ ಬದುಕಿನಲ್ಲಿ ಬದಲಾವಣೆ ತಂದು, ಸಮಾಜದಲ್ಲಿ ಸಮಾನತೆ ತರುವ ಕೆಲಸ ಮಾಡಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಗುರುವಾರ ನಡೆದ ಪೌರ-ಕಾರ್ಮಿಕರ ದಿನಾಚರಣೆ ಹಾಗೂ 12,692 ಮಂದಿ ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ಸಮಾಜ ಸುಭದ್ರವಾಗಿರಲು ನಾಲ್ಕು ಆಧಾರ ಸ್ತಂಭಗಳಿರಬೇಕು. ಅವುಗಳೆಂದರೆ ಕೃಷಿಕ, ಕಾರ್ಮಿಕ, ಸೈನಿಕ ಹಾಗೂ ಶಿಕ್ಷಕ. ಕಾರ್ಮಿಕರು ಈ ಸಮಾಜದ ಆಧಾರಸ್ತಂಭ. ನಮ್ಮ ಸರ್ಕಾರಕಾರ ಪೌರಕಾರ್ಮಿಕರನ್ನು ದೇವರ ಮಕ್ಕಳು, ಸ್ವಚ್ಛತಾ ರಾಯಭಾರಿಗಳು ಎಂದು ಭಾವಿಸುತ್ತಿದೆ. ನೀವು ಸಮಾಜದ ಆರೋಗ್ಯ ಕಾಪಾಡುತ್ತಿರುವ ವೈದ್ಯರು, ನೀವು ಬೆಂಗಳೂರು ನಗರವನ್ನು ಸುಂದರವಾಗಿಟ್ಟು ಸೇವೆ ಮಾಡಿರುವುದಕ್ಕೆ ಈ ನಗರಕ್ಕೆ ವಿಶ್ವ ಮಟ್ಟದ ಹೆಸರು ಬಂದಿದೆ. ಇಡೀ ವಿಶ್ವಕ್ಕೆ ದೊಡ್ಡ ಸೇವೆ ಮಾಡುವ ಕಾರ್ಮಿಕರ ದಿನವಿಂದು” ಎಂದು ಶ್ಲಾಘಿಸಿದರು.

“ಪುರದ ಹಿತ ಕಾಪಾಡುತ್ತಿರುವವರು ಪೌರ ಕಾರ್ಮಿಕರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಾವು ವಿರೋಧ ಪಕ್ಷದಲ್ಲಿದ್ದಾಗ ಹಾಗೂ ನನ್ನ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷ ಪೌರ ಕಾರ್ಮಿಕರನ್ನು ಸರಕಾರಿ ಕಾರ್ಮಿಕರನ್ನಾಗಿ ಮಾಡುವ ಮಾತು ಕೊಟ್ಟಿದ್ದೆವು. ನಾವುಗಳು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಪೌರ ಕಾರ್ಮಿಕರ ಮಕ್ಕಳೇ ಇಂದು ಈ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ, ಬುದ್ಧಿವಂತರಾಗಿ ದೊಡ್ಡ ಹುದ್ದೆ ಅಲಂಕರಿಸುವಂತೆ ಮಾಡಬೇಕು ಎಂಬುದು ನಮ್ಮ ಸರಕಾರದ ಉದ್ದೇಶ” ಎಂದು ಹೇಳಿದರು.

“ಯೋಗಿ ಎನಿಸಿಕೊಳ್ಳುವುದಕ್ಕಿಂತ ಉಪಯೋಗಿ ಎನಿಸಿಕೊಂಡರೆ ಬದುಕಿಗೆ ಹೆಚ್ಚು ಬೆಲೆ. ಪೌರಕಾರ್ಮಿಕರನ್ನು ಕುವೆಂಪು ಅವರು ಶಿವನಿಗೆ ಹೋಲಿಸಿದ್ದರು. 'ಬೀದಿ ಗುಡಿಸುವ ಬಡವನೆದೆಯಲ್ಲಿ ನಾವಿದ್ದೇವೆ. ಉಳುಮೆ ಮಾಡುವ ಒಕ್ಕಲಿಗನ ಜತೆ ನಾವಿದ್ದೇವೆ. ಅಂಜದಿರು ಸೋದರನೇ ನಿಮ್ಮ ಜತೆ ನಾವಿದ್ದೇವೆ' ಎಂದು ಕುವೆಂಪು ಅವರು ಹೇಳಿದ್ದರು. ಇಂದು ನಿಮ್ಮ ಬದುಕು ಬದಲಾವಣೆಯಾಗುತ್ತಿರುವ ಬಹಳ ಪವಿತ್ರವಾದ ದಿನ. ಇಂದು ನೀವು ಸರಕಾರಿ ನೌಕರರಾಗಿದ್ದೀರಿ” ಎಂದು ತಿಳಿಸಿದರು.

“ಮಲ್ಲಿಕಾರ್ಜುನ ಖರ್ಗೆ ಅವರು ಮುನ್ಸಿಪಲ್ ಅಧ್ಯಕ್ಷರಾಗಿ ಜೀವನ ಆರಂಭಿಸಿದವರು. ಇಂದು ದೇಶದ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಮಹಾತ್ಮಾ ಗಾಂಧಿಜಿ, ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಅಲಂಕರಿಸಿದ ಹುದ್ದೆಯಲ್ಲಿದ್ದಾರೆ. ಖರ್ಗೆ ಅವರು ಕಾರ್ಮಿಕ ಸಚಿವರಾಗಿ ಮಾಡಿದ ಕೆಲಸಗಳು ದೇಶದ ಇತಿಹಾಸ ಪುಟ ಸೇರಿವೆ. ದೇಶದ ಉದ್ದಗಲದಲ್ಲಿ ಇಎಸ್ಐ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳನ್ನು ಆರಂಭಿಸಿದ್ದಾರೆ. ಹೀಗಾಗಿ ಅವರಿಂದಲೇ ಈ ಕಾರ್ಯಕ್ರಮ ಉದ್ಘಾಟಿಸಲು ತೀರ್ಮಾನಿಸಿದ್ದೇವೆ” ಎಂದರು.

“ಪೌರ ಕಾರ್ಮಿಕರ ಅಭಿವೃದ್ಧಿಗಾಗಿ ಪಾಲಿಕೆ ಬಜೆಟ್ ನಲ್ಲಿ ರೂ. 600 ಕೋಟಿ ಹಣ ಮೀಸಲಿಡಲಾಗಿದ್ದು, ಒಂದೇ ಒಂದು ರೂಪಾಯಿ ಲಂಚ ಪಡೆಯದೇ ನಿಮ್ಮನ್ನು ಖಾಯಂ ಮಾಡಲಾಗಿದೆ. ಸಿಂಧುತ್ವ ವಿಚಾರದಲ್ಲಿ ಕೆಲವು ಗೊಂದಲಗಳಿರುವ ಕಾರಣಕ್ಕೆ ಕೆಲವರ ಕೆಲಸ ಖಾಯಂ ಆಗಿಲ್ಲ. ಈ ಬಗ್ಗೆ ಪ್ರತ್ಯೇಕವಾಗಿ ಬೂತ್ ಆರಂಭಿಸಿ, ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿಸಿ ನಿಮ್ಮೆಲ್ಲರಿಗೂ ನ್ಯಾಯ ಒದಗಿಸಲಾಗುವುದು” ಎಂದು ವಾಗ್ದಾನ ನೀಡಿದರು.

“ಇದ್ದಾಗ ರೊಟ್ಟಿ ಕೊಟ್ಟರೆ, ಸತ್ತಾಗ ಸ್ವರ್ಗ ಸಿಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮ ಸರ್ಕಾರ ನಿಮ್ಮ ಸರ್ಕಾರ. ಬೆಂಗಳೂರಿನ ಕಾಂಗ್ರೆಸ್ ಶಾಸಕರು ಸದಾ ನಿಮ್ಮನ್ನು ಖಾಯಂ ಮಾಡುವ ಬಗ್ಗೆ ನನ್ನ ಮೇಲೆ ಒತ್ತಡ ಹಾಕುತ್ತಿದ್ದರು. ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ಈ ಕೆಲಸ ಮಾಡಿದ್ದೇವೆ. ಇದು ನಮ್ಮ ಸಂಕಲ್ಪ. ಸಮಾಜ ಎನ್ನುವ ಚಕ್ರದಲ್ಲಿ ಕೆಳಗಿರುವವರು ಮೇಲಕ್ಕೆ ಹೋಗುತ್ತಾರೆ, ಮೇಲಿರುವವರು ಕೆಳಗೆ ಹೋಗುತ್ತಾರೆ ಎಂದು ವಿವೇಕಾನಂದ ಅವರು ಹೇಳಿದ್ದಾರೆ. ಅದೇ ರೀತಿ ನಿಮಗೆ ಸಮಾನತೆ ನೀಡುವ ಕೆಲಸ ಮಾಡಲಾಗುತ್ತಿದೆ” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News